9 ವರ್ಷಗಳ ಹಿಂದಿನ ಕೆದಿಲ ದರೋಡೆ ಪ್ರಕರಣ : 41 ವಾರಂಟ್ ಇದ್ದ ಆರೋಪಿ ಕೇರಳದಲ್ಲಿ ಬಂಧನ

0
13

ಪುತ್ತೂರು : ಸುಮಾರು 9 ವರ್ಷಗಳ ಹಿಂದೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದ ತ್ರಿಶೂರ್‌ನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ತ್ರಿಶೂರ್ ನಿವಾಸಿ ನೆಲ್ಸನ್ ಸಿ.ವಿ. (38) ಎಂದು ಗುರುತಿಸಲಾಗಿದೆ.

2017ರ ಡಿಸೆಂಬರ್ 22ರಂದು ಕೆದಿಲದ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತರು ಮನೆಯವರನ್ನು ಪಿಸ್ತೂಲ್ ಹಾಗೂ ಚೂರಿ ತೋರಿಸಿ ಬೆದರಿಸಿ ಸುಮಾರು ₹2.88 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹60,000 ನಗದು ದರೋಡೆ ಮಾಡಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿಯಾಗಿದ್ದ ನೆಲ್ಸನ್ ಸಿ.ವಿ. ಜಾಮೀನು ಪಡೆದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ 41 ಬಾರಿ ದಸ್ತಗಿರಿ ವಾರಂಟ್ ಜಾರಿಗೊಳಿಸಿತ್ತು.

ಜುಲೈ 8ರಂದು ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಎ., ಕಾನ್‌ಸ್ಟೇಬಲ್ ವಿನಾಯಕ ಹಾಗೂ ಶಿವರಾಜ್ ಅವರು ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರು ಪ್ರದೇಶದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಯು ಷರತ್ತುಬದ್ಧ ಜಾಮೀನು ಪಡೆದು ಬಳಿಕ ನ್ಯಾಯಾಲಯದ ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದರಿಂದ, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 269ರ ಅಡಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣವೂ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here