ಯಂತ್ರಕ್ಕೆ ಸಿಲುಕಿದ ದುಪ್ಪಟ್ಟಾ ; ಕ್ಷಣಾರ್ಧದಲ್ಲಿ ಮಹಿಳೆಯ ಜೀವ ಬಲಿ

0
30

ಹುಬ್ಬಳ್ಳಿ : ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುಪ್ಪಟ್ಟಾ ಯಂತ್ರದ ಬೆಲ್ಟ್‌ಗೆ ಸಿಲುಕಿ 50 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ.

ಮೃತರನ್ನು ಆಲಿಯಾ ಬೇಗಂ (50) ಎಂದು ಗುರುತಿಸಲಾಗಿದೆ. ಅವರು ತಮ್ಮ ಸ್ವಂತ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಲಿಯಾ ಬೇಗಂ ಧರಿಸಿದ್ದ ದುಪ್ಪಟ್ಟಾ ಯಂತ್ರದ ಬೆಲ್ಟ್‌ಗೆ ಆಕಸ್ಮಿಕವಾಗಿ ಸಿಲುಕಿದೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಕುರಿತು ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಕಸಬಾಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಬಂಧ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here