ಆನೇಕಲ್ ಬೆಂಗಳೂರು : ಅಲಯನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಜುಲೈ 11 ರಂದು ಹಮ್ಮಿಕೊಳ್ಳಲಾದ “ತುಳುವೆರೆ ಜಾಲಾಟೋರ್ದು ಯಕ್ಷಗಾನ ಮುಟ್ಟ” ಎಂಬ ದಿನವಿಡೀ ನಡೆಯುವ ತುಳು ಯಕ್ಷಗಾನ ಕಾರ್ಯಾಗಾರ, ಪ್ರದರ್ಶನ ಹಾಗೂ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ಕಾರ್ಯಕ್ರಮಕ್ಕೆ ಸಡಗರದ ವಿದ್ಯುಕ್ತ ಚಾಲನೆ ದೊರೆಯಿತು.
ತುಳು ವರ್ಲ್ಡ್ ಫೌಂಡೇಶನ್ ಮತ್ತು ಬೆಂಗಳೂರಿನ ತುಳುವೆರೆ ಚಾವಡಿ ತೆಂಕಾಯಿ ಸಂಘಟನೆಗಳು ಜಂಟಿಯಾಗಿ, ಅಲಯನ್ಸ್ ವಿಶ್ವವಿದ್ಯಾಲಯದ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್’ ಹಾಗೂ ‘ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆಂಡ್ ಕ್ರಿಯೇಟಿವ್ ಆರ್ಟ್ಸ್’ ಸಹಯೋಗದೊಂದಿಗೆ ಈ ವಿಶಿಷ್ಟ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿವೆ.

ಪ್ರಶಾಂತ್ ರೈ ಅವರ ಸುಮಧುರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭವನ್ನು ಗಣ್ಯರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು, “ದೇಶದಲ್ಲಿ ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾಲಯಗಳು ಆದ್ಯತೆಯ ಮೇರೆಗೆ ಕೆಲಸ ಮಾಡಬೇಕಿದೆ.
ಈ ನಡುವೆ ತುಳು ಭಾಷೆಯು ನಿರಂತರವಾಗಿ ಉನ್ನತಿಗೇರುತ್ತಿರುವುದು ಸಂತಸದ ವಿಷಯ” ಇದಕ್ಕಾಗಿ ತುಳು ವರ್ಲ್ಡ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ದಿಕ್ಸೂಚಿ ಭಾಷಣ ಮಾಡಿ, ಜಾಲಾಟ ಎಂಬುದು ಅತ್ಯಂತ ಪ್ರಾಚೀನ ವಾಗಿದ್ದು ಇದು ಮೂರರಿಂದ ಐದು ದಿನಗಳ ಕಾಲ ನಿರಂತರವಾಗಿ ನಡೆಯುತ್ತದನ್ನು ನೆನಪಿಸಿಕೊಂಡು ದೈವಾರಾಧನೆಗಿಂತ ಪೂರ್ವದಲ್ಲಿಯೇ ಜಾಲಾಟವಿದ್ದು ತುಳು ಭಾಷೆ ದೈವರಾದನೆ ಯಕ್ಷಗಾನ ಇವುಗಳೆಲ್ಲದಕ್ಕಿಂತಲೂ ಪೂರ್ವದಲ್ಲಿಯೇ ಇತ್ತು ಮತ್ತು ಪರಸ್ಪರ ನೇರ ಸಂಬಂಧವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು
ಯಕ್ಷಗಾನ ಮತ್ತು ತುಳು ಭಾಷೆಯ ಶ್ರೀಮಂತ ಪರಂಪರೆಯನ್ನು ನೆರೆದಿದ್ದ ಸಭಿಕರ ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ CoE IKS ನಿರ್ದೇಶಕರಾದ ಡಾ. ಎ. ಎಮ್. ಶ್ರೀಧರನ್ ಅವರು ಎಲ್ಲರನ್ನೂ ಸ್ವಾಗತಿಸಿದರೆ, ತುಲುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಅವರು ಕಾರ್ಯಕ್ರಮದ ಆಶಯದ ಕುರಿತು ಪ್ರಸ್ತಾವನೆ ಮಂಡಿಸಿದರು.
ವೇದಿಕೆಯಲ್ಲಿ ತುಲುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಭಾನುಮತಿ ಶೆಟ್ಟಿ, ವಿಶ್ವವಿದ್ಯಾಲಯದ ವಿಭಾಗ ಮುಖ್ಯಸ್ಥರಾದ ಡಾ. ಶ್ರುತಿ ಚಂದ್ರಶೇಖರ್ ಮತ್ತು ತುಳುವೆರೆ ಚಾವಡಿ, ಡಾ. ಲಿಜು,ತೆಂಕಾಯಿ ಸಂಘಟನೆಯ ಖಜಾಂಚಿ ವಿನೋದ್ ಕುಮಾರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಚಾಲನೆಗೆ ಸಾಕ್ಷಿಯಾದರು.
ಶೈಕ್ಷಣಿಕ ವಲಯದಲ್ಲಿ ತುಳು ಸಂಸ್ಕೃತಿ ಮತ್ತು ಕಲೆಯ ಪ್ರಸರಣಕ್ಕೆ ಈ ಸಮಾವೇಶವು ಒಂದು ಭದ್ರ ಬುನಾದಿ ಹಾಕಿಕೊಟ್ಟಿದೆ.
ವರದಿ-ಮಂದಾರ ರಾಜೇಶ್

