ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಅನಾರ್ಕಲಿ ಸಲೀಂ ಆಯ್ಕೆ

0
7

ಮಂಗಳೂರು : ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕವಿ, ಸಾಹಿತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಾರ್ಕಲಿ ಸಲೀಂ (ಸಲೀಂಪಾಷ) ಅವರನ್ನು ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದವರಾದ ಸಲೀಂಪಾಷ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಲೇರಿಯಾ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 29 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ತರಬೇತಿ ಕೇಂದ್ರದ ಪ್ರಭಾರ ಪ್ರಾಂಶುಪಾಲರು, ಬೋಧಕರು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಮೂರು ದಶಕಗಳಿಂದ ಸಕ್ರಿಯರಾಗಿರುವ ಅವರು, ವಿವಿಧ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಕವಿತೆ, ಹನಿಗವನ, ಲೇಖನ, ವಿಮರ್ಶೆ ಹಾಗೂ ಸಾಧಕರ ಪರಿಚಯ ಲೇಖನಗಳನ್ನು ಪ್ರಕಟಿಸಿದ್ದಾರೆ. “ಹೂ ಅರಳುವ ಮುನ್ನ” ಎಂಬ ಹನಿಗವನ ಸಂಕಲನವನ್ನು ಪ್ರಕಟಿಸಿರುವ ಅವರು, ರಾಜ್ಯದ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನದ ಮೂಲಕ ಸಾಹಿತ್ಯಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಆರೋಗ್ಯ ಜಾಗೃತಿ ಮೂಡಿಸುವ ಕವಿತೆಗಳು, ಲಾವಣಿಗಳು, ಬೀದಿ ನಾಟಕಗಳನ್ನು ರಚಿಸಿರುವ ಸಲೀಂಪಾಷ ಅವರು ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು, ಕುರುಕ್ಷೇತ್ರ, ದಾನಶೂರ ಕರ್ಣ, ಪಾದುಕಾ ಕಿರೀಟಿ ಸೇರಿದಂತೆ ಹಲವು ಪೌರಾಣಿಕ ನಾಟಕಗಳಲ್ಲಿ ಅಭಿಮನ್ಯು, ದುಶ್ಯಾಸನ, ಪರಶುರಾಮ, ಯಮ, ಜಯದ್ರಥ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿನ ಅವರ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈಗಾಗಲೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, ರಾಜ್ಯ ಮಟ್ಟದ ಚುಟುಕು ಶ್ರೀ, ಕಾವ್ಯ ಶ್ರೀ, ಚೈತನ್ಯ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಅನಾರ್ಕಲಿ ಸಲೀಂ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here