‘ಕನ್ನಡ ಪಯಸ್ವಿನಿ ಅಂತಾರಾಷ್ಟ್ರೀಯ ಯೋಗರತ್ನ ಅಚೀವ್‌ಮೆಂಟ್ ಅವಾರ್ಡ್-2026’ಗೆ ನಾಗರತ್ನ ಎಸ್. ಹಿರೇಮಠ ಆಯ್ಕೆ

0
5

ಕನ್ನಡಪರ ಹೋರಾಟಗಾರ್ತಿ, ಕವಿ, ಲೇಖಕಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿರುವ ಯೋಗ ಸಾಧಕಿ ನಾಗರತ್ನ ಎಸ್. ಹಿರೇಮಠ ಅವರನ್ನು ಪ್ರತಿಷ್ಠಿತ **”ಕನ್ನಡ ಪಯಸ್ವಿನಿ ಅಂತಾರಾಷ್ಟ್ರೀಯ ಯೋಗರತ್ನ ಅಚೀವ್‌ಮೆಂಟ್ ಅವಾರ್ಡ್–2026″**ಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರು ಪದ್ಮನಾಭನಗರ ನಿವಾಸಿಯಾಗಿರುವ ನಾಗರತ್ನ ಎಸ್. ಹಿರೇಮಠ ಅವರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷೆ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಪದ್ಮನಾಭನಗರ ಶರಣ ಸಾಹಿತ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕನ್ನಡ, ಸಾಹಿತ್ಯ, ಯೋಗ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡದ ಬೆಳವಣಿಗೆ, ಮಹಿಳಾ ಸಬಲೀಕರಣ, ಸಾಹಿತ್ಯ ಚಟುವಟಿಕೆಗಳು ಹಾಗೂ ಯೋಗ ಕ್ಷೇತ್ರದಲ್ಲಿನ ಅವರ ಗಣನೀಯ ಸಾಧನೆಯನ್ನು ಪರಿಗಣಿಸಿ, ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿನಾಡು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಈ ಪ್ರತಿಷ್ಠಿತ ಅಂತರ್‌ರಾಜ್ಯ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.

ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ನಾಗರತ್ನ ಎಸ್. ಹಿರೇಮಠ ಅವರಿಗೆ “ಕನ್ನಡ ಪಯಸ್ವಿನಿ ಅಂತಾರಾಷ್ಟ್ರೀಯ ಯೋಗರತ್ನ ಅಚೀವ್‌ಮೆಂಟ್ ಅವಾರ್ಡ್–2026” ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಶಸ್ತಿ ಆಯ್ಕೆಗೆ ಸಾಹಿತ್ಯ, ಯೋಗ ಹಾಗೂ ಕನ್ನಡಾಭಿವೃದ್ಧಿ ಕ್ಷೇತ್ರದ ಗಣ್ಯರು ನಾಗರತ್ನ ಎಸ್. ಹಿರೇಮಠ ಅವರನ್ನು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here