ಸಾರ್ವಜನಿಕ ಜಾಗ ಖಾಸಗೀಕರಣವೇ? ಹೋಟೆಲ್‌ಗಾಗಿ ಬಸ್ ನಿಲ್ದಾಣದ ಸೌಲಭ್ಯಗಳೇ ಬಲಿಯಾಗುತ್ತಿವೆಯೇ?

0
78

ಹೋಟೆಲ್ ಮುಂಭಾಗ ಸಾರ್ವಜನಿಕ ಪಾರ್ಕಿಂಗ್‌ನಲ್ಲಿ ಕುರ್ಚಿಗಳ ಅಳವಡಿಕೆ ಆರೋಪ


ಮೂಡುಬಿದಿರೆ: ಖಾಸಗಿ ಬಸ್ ನಿಲ್ದಾಣದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಹೋಟೆಲ್‌ಗಾಗಿ ಸಾರ್ವಜನಿಕ ಸೌಲಭ್ಯಗಳನ್ನೇ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರು ಹಾಗೂ ಇತರ ಬಾಡಿಗೆದಾರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಹೋಟೆಲ್ ಕಾಮಗಾರಿ ಆರಂಭವಾದ ಬಳಿಕ ಪ್ರಯಾಣಿಕರ ಬಳಕೆಯಲ್ಲಿದ್ದ ಎರಡು ಸಿಮೆಂಟ್ ಬೆಂಚ್‌ಗಳನ್ನು ತೆರವುಗೊಳಿಸಿರುವುದಷ್ಟೇ ಅಲ್ಲದೆ, ಹೋಟೆಲ್ ಮುಂಭಾಗದ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಕುರ್ಚಿಗಳನ್ನು ಅಳವಡಿಸಿ ಗ್ರಾಹಕರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಇತರ ಅಂಗಡಿಗಳ ಗ್ರಾಹಕರು ವಾಹನ ನಿಲುಗಡೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈಗಾಗಲೇ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಾಕಷ್ಟು ವ್ಯವಸ್ಥೆ ಇಲ್ಲದಿರುವಾಗ ಸಿಮೆಂಟ್ ಬೆಂಚ್‌ಗಳ ತೆರವು ಪ್ರಯಾಣಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ವಯೋವೃದ್ಧರು, ಮಹಿಳೆಯರು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯಬೇಕಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಪುರಸಭೆ, ಪೊಲೀಸ್ ಇಲಾಖೆ, ಖಾಸಗಿ ಬಸ್ ಮಾಲಕರ ಸಂಘ ಹಾಗೂ ಬಾಡಿಗೆದಾರರ ಸಭೆಯಲ್ಲಿ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆ ಇನ್ನೂ ಜಾರಿಯಾಗಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ಇತರ ಬಾಡಿಗೆದಾರರು, ಒಂದು ಹೋಟೆಲ್‌ನ ಅನುಕೂಲಕ್ಕಾಗಿ ಸಾರ್ವಜನಿಕ ಸೌಲಭ್ಯಗಳನ್ನು ಕಡಿತಗೊಳಿಸುವುದು ಹಾಗೂ ಸಾರ್ವಜನಿಕ ಜಾಗವನ್ನು ಖಾಸಗಿ ಬಳಕೆಗೆ ತಿರುಗಿಸುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲ ಬಾಡಿಗೆದಾರರಿಗೂ ಒಂದೇ ನಿಯಮ ಅನ್ವಯಿಸಿ, ಅತಿಕ್ರಮಣ ಮತ್ತು ನಿಯಮ ಉಲ್ಲಂಘನೆ ವಿರುದ್ಧ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಾಧಿಕಾರಿ ಇಂದು ಎಂ., ಬಸ್ ನಿಲ್ದಾಣದಲ್ಲಿನ ಅತಿಕ್ರಮಣ ತೆರವುಗೊಳಿಸಿ, ಸಾರ್ವಜನಿಕ ಪಾರ್ಕಿಂಗ್ ಸ್ಥಳವನ್ನು ಮೂಲ ಉದ್ದೇಶಕ್ಕೇ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು. ತೆರವುಗೊಳಿಸಲಾದ ಸಿಮೆಂಟ್ ಬೆಂಚ್‌ಗಳನ್ನು ಮರುಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ವರದಿ : ಜಗದೀಶ್ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here