ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಇರಾನ್ ಸಂಘರ್ಷದ (Iran war) ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ (Hormuz) ಯುಎಇ (UAE) ಒಡೆತನದ ಎರಡು ಪ್ರಮುಖ ತೈಲ ನೌಕೆಗಳ ಮೇಲೆ ಇರಾನ್ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ. ಈ ಭೀಕರ ದಾಳಿಯಲ್ಲಿ ನೌಕೆಯಲ್ಲಿದ್ದ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದು, ಆರು ಭಾರತೀಯರು ಸೇರಿದಂತೆ ಒಟ್ಟು ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಓಮನ್ ಜಲಪ್ರದೇಶಕ್ಕೆ ಒಳಪಡುವ ಹಾರ್ಮುಜ್ ಜಲಸಂಧಿಯ ದಕ್ಷಿಣದ ಹಡಗು ಸಂಚಾರ ಮಾರ್ಗದಲ್ಲಿ ಯುಎಇ ರಾಷ್ಟ್ರೀಯ ತೈಲ ನೌಕೆಗಳಾದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಸಂಚರಿಸುತ್ತಿದ್ದಾಗ ಈ ದಾಳಿ ನಡೆದಿದೆ. ಇರಾನ್ ಉಡಾಯಿಸಿದ ಎರಡು ಕ್ರೂಸ್ ಕ್ಷಿಪಣಿಗಳು ಈ ನೌಕೆಗಳಿಗೆ ನೇರವಾಗಿ ಅಪ್ಪಳಿಸಿವೆ. ಪರಿಣಾಮವಾಗಿ ನೌಕೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಭಾರತೀಯರಲ್ಲದೆ ಇಬ್ಬರು ಉಕ್ರೇನ್ ಪ್ರಜೆಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ತೀವ್ರತೆಗೆ ಗಾಯಗೊಂಡ ಎಂಟು ಜನರಲ್ಲಿ ನಾಲ್ವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ವರದಿಯಾಗಿದೆ. ಸದ್ಯ ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ಬೆನ್ನಲ್ಲೇ ತೈಲ ನೌಕೆಗಳಲ್ಲಿ ಹೊತ್ತಿ ಉರಿದ ಬೆಂಕಿಯನ್ನು ನಂದಿಸಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ನಡೆದಿರುವ ಈ ದಾಳಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದು, ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

