ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ವಾರ್ಡ್ ನಂ.3ರ ರಸ್ತೆಯ ದುಸ್ಥಿತಿಯಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಸುಮಾರು 150ಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದಲ್ಲಿ ಅಂಗನವಾಡಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯವರೆಗೆ ಶೈಕ್ಷಣಿಕ ಸಂಸ್ಥೆಗಳಿದ್ದರೂ, ಸುಮಾರು 30 ವರ್ಷಗಳ ಹಿಂದೆ ಹಾಕಿದ ಶಿಲೆಗಲ್ಲಿನ ರಸ್ತೆಯನ್ನೇ ಇಂದಿಗೂ ಬಳಸಲಾಗುತ್ತಿದೆ. ಈ ಅವಧಿಯಲ್ಲಿ ರಸ್ತೆಗೆ ಯಾವುದೇ ಸಮರ್ಪಕ ದುರಸ್ತಿ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಹಾಗೂ ಕಲ್ಲುಗಳು ಇರುವುದರಿಂದ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು, ಶಾಲಾ ವಾಹನಗಳು, ಬೈಕ್ ಹಾಗೂ ಆಟೋ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವವರೆಗೆ ಪೋಷಕರು ಆತಂಕದಲ್ಲಿರುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಾಲ್ತೋಡು, ಗೊರ್ಕಲ್, ಅಲ್ಸಾಡಿ, ಜೋಗಿಜಡ್ಡು, ಬೋಳಂಬಳ್ಳಿ, ರಾಗಿಹಕ್ಲು ಹಾಗೂ ಬ್ಯಾಟಿಯಾಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಶಾಲೆಗೆ ಆಗಮಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿರುವ ಕಾರಣ ಕೆಲವು ವಾಹನ ಚಾಲಕರು ಹಾಗೂ ಆಟೋ ಚಾಲಕರು ಈ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಮಾತ್ರವಲ್ಲದೆ, ಬೀದಿದೀಪ ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಇರುವುದಾಗಿ ಗ್ರಾಮಸ್ಥರು ದೂರಿದ್ದಾರೆ. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು, ಬೈಂದೂರು ತಾಲೂಕು ಆಡಳಿತ ಹಾಗೂ ಉಡುಪಿ ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂದು ಕುಲಾಲ ಯುವ ವೇದಿಕೆ ಅಧ್ಯಕ್ಷ ಸುರೇಶ್ ಕುಲಾಲ್ ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ.

