ಪ್ರಿಯಕರನ ಜೊತೆಗೂಡಿ ಪತಿ ಹತ್ಯೆ ; ಶವವನ್ನು ತುಂಡು ಮಾಡಿ ಕಾಡಿಗೆ ಎಸೆದ ಪತ್ನಿ

0
149

ನವಿ ಮುಂಬೈ, : ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಡು-ತುಂಡು ಮಾಡಿ ಕಾಡಿನಲ್ಲಿ ಎಸೆದಿದ್ದ ಭೀಕರ ಪ್ರಕರಣವೊಂದು ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಸುಮಾರು 11 ತಿಂಗಳ ಬಳಿಕ ಪೊಲೀಸರ ತನಿಖೆಯಲ್ಲಿ ಈ ಕೃತ್ಯ ಬಯಲಾಗಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

ಬಂಧಿತರನ್ನು ಸುನಿತಾ ಕುಶ್ವಾಹ ಹಾಗೂ ಆಕೆಯ ಪ್ರಿಯಕರ, ಆಟೋ ಚಾಲಕ ರಾಹುಲ್ ದಶರಥ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಮೃತನನ್ನು ಬಲಿರಾಮ್ ಸೂರ್ಯನಾಥ್ ಕುಶ್ವಾಹ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸುನಿತಾಗೆ ರಾಹುಲ್ ಜೊತೆ ವಿವಾಹೇತರ ಸಂಬಂಧವಿದ್ದು, ಈ ವಿಷಯ ತಿಳಿದಿದ್ದ ಪತಿ ಬಲಿರಾಮ್ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದರಿಂದ ಇಬ್ಬರೂ ಸೇರಿ 2025ರ ಆಗಸ್ಟ್ 9ರಂದು ಬಲಿರಾಮ್ ಗಾಢ ನಿದ್ದೆಯಲ್ಲಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ, ಚೀಲ ಹಾಗೂ ಬೆಡ್‌ಶೀಟ್‌ನಲ್ಲಿ ಸುತ್ತಿ ಆಟೋದಲ್ಲಿ ಸಾಗಿಸಿ ನವಿ ಮುಂಬೈ ಹೊರವಲಯದ ಗವ್ಲಿದೇವ್ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವಿವಿಧೆಡೆ ಎಸೆದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಯ ಬಳಿಕ ಸುನಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಬೇರೆಡೆ ವಾಸಕ್ಕೆ ತೆರಳಿ, ಪತಿ ಮನೆ ಬಿಟ್ಟು ಹೋಗಿದ್ದಾನೆ ಎಂದು ಸಂಬಂಧಿಕರು ಹಾಗೂ ನೆರೆಹೊರೆಯವರನ್ನು ನಂಬಿಸಿ ಸುಮಾರು 11 ತಿಂಗಳು ಪ್ರಕರಣವನ್ನು ಮುಚ್ಚಿಟ್ಟಿದ್ದಳು.

2026ರ ಏಪ್ರಿಲ್‌ನಲ್ಲಿ ಬಲಿರಾಮ್ ಸಹೋದರ ನೀಡಿದ ನಾಪತ್ತೆ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಕಾಲ್ ರೆಕಾರ್ಡ್, ಮೊಬೈಲ್ ಲೊಕೇಶನ್ ಹಾಗೂ ಇತರೆ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ನ್ಯಾಯಾಲಯ ಆರೋಪಿಗಳನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಮೃತನ ಅಸ್ಥಿಪಂಜರ ಹಾಗೂ ಇತರ ಸಾಕ್ಷ್ಯಗಳಿಗಾಗಿ ಪೊಲೀಸರು ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.