ಸೈಬರ್ ವಂಚಕರ ಹೊಸ ಬಲೆ; WhatsApp ಲಿಂಕ್‌ನಿಂದ ಬ್ಯಾಂಕ್ ಖಾತೆಗೆ ಕನ್ನ
ಕಾರ್ಕಳ : ಟ್ರಾಫಿಕ್ ದಂಡದ ನೋಟಿಸ್ ಹೆಸರಿನಲ್ಲಿ ಕಳುಹಿಸಲಾದ ನಕಲಿ mParivahan.apk ಲಿಂಕ್‌ನ್ನು ಡೌನ್‌ಲೋಡ್ ಮಾಡಿದ ಪರಿಣಾಮ ಅಜೆಕಾರಿನ ವ್ಯಕ್ತಿಯೊಬ್ಬರು ₹6,83,599.63 ಹಣವನ್ನು ಕಳೆದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಅಜೆಕಾರಿನ ರತ್ನಾಕರ್ ಅಮೀನ್ ಅವರಿಗೆ ಜುಲೈ 5ರಂದು ವಾಟ್ಸಾಪ್ ಮೂಲಕ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿತ ಸಂದೇಶ ಬಂದಿದ್ದು, ಅದರಲ್ಲಿ mParivahan.apk ಎಂಬ ನಕಲಿ ಆ್ಯಪ್ ಲಿಂಕ್ ಕಳುಹಿಸಲಾಗಿತ್ತು. ನಿಜವಾದ ಸರ್ಕಾರಿ ಸಂದೇಶವೆಂದು ಭಾವಿಸಿ ಅವರ ಪುತ್ರ ಆ ಲಿಂಕ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾನೆ.
ನಂತರ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬ್ಯಾಂಕ್ ಖಾತೆಯ ಸುರಕ್ಷತೆ ಹೆಸರಿನಲ್ಲಿ ಗೂಗಲ್ ಪಿನ್ ಬದಲಾಯಿಸುವಂತೆ ಸೂಚಿಸಿದ್ದಾನೆ. ಬಳಿಕ ಜುಲೈ 12ರಂದು ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾಗಿರುವ ಸಂದೇಶಗಳು ಬಂದಿದ್ದು, ಪರಿಶೀಲಿಸಿದಾಗ ಒಟ್ಟು ₹6,83,599.63 ವಿವಿಧ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ.
ತಕ್ಷಣವೇ ಸಂತ್ರಸ್ತರು 1930 ಸೈಬರ್ ಹೆಲ್ಪ್‌ಲೈನ್ಗೆ ದೂರು ನೀಡಿ, ಬಳಿಕ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕರು ಅಪರಿಚಿತ APK ಫೈಲ್‌ಗಳು ಅಥವಾ ಸರ್ಕಾರಿ ಇಲಾಖೆಯ ಹೆಸರಿನಲ್ಲಿ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

