ಹಣದಾಸೆಗೆ ಪೋಷಕರೇ ಮಗಳನ್ನು ವಿದೇಶದಲ್ಲಿ ಮಾರಾಟ ಮಾಡಿದರಾ? ತನಿಖೆಗೆ ಪೊಲೀಸ್ ಮೊರೆ

0
34

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಹಕ್ಕಿಪಿಕ್ಕಿ ಕಾಲೋನಿಯ 20 ವರ್ಷದ ಯುವತಿಯೊಬ್ಬಳನ್ನು ಹಣಕ್ಕಾಗಿ ಪೋಷಕರೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ಅವರ ಪುತ್ರಿ ನಂದಿತಾ (20) ಸುಮಾರು ನಾಲ್ಕು ತಿಂಗಳ ಹಿಂದೆ ಕುಟುಂಬದೊಂದಿಗೆ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಸೆನೆಗಲ್‌ಗೆ ತೆರಳಿದ್ದರು. ಆದರೆ ಸುಮಾರು ಹತ್ತು ದಿನಗಳ ಹಿಂದೆ ಆಕೆಯನ್ನು 7 ಲಕ್ಷ ರೂಪಾಯಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆರೋಪದ ಪ್ರಕಾರ, ನಂದಿತಾ ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿ, ತನ್ನನ್ನು ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾಳೆ. ನಡೆದಿರುವ ಅನ್ಯಾಯವನ್ನು ವಿವರಿಸಿ ವಿಡಿಯೋ ಸಂದೇಶವನ್ನೂ ರವಾನಿಸಿದ್ದಾಳೆ ಎನ್ನಲಾಗಿದೆ.

ವಿಷಯ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ಬಂದ ಬಳಿಕ, ಸ್ಥಳೀಯ ಅಧಿಕಾರಿಗಳು ಹಾಗೂ ಸೆನೆಗಲ್ ಪೊಲೀಸರ ಸಹಕಾರದಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಈ ನಡುವೆ, ಮಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಪೋಷಕರು ಸಂಬಂಧಿಕರಿಗೆ ಬೇರೆ ಮಾಹಿತಿ ನೀಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಯುವತಿ ರಕ್ಷಿಸಲ್ಪಟ್ಟಿರುವ ವಿಚಾರ ತಿಳಿದ ನಂತರ ಪೋಷಕರು ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ.

ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜುಲೈ 15ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ಪತ್ರ ಬರೆದು, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದೆ. ಗಿಡಮೂಲಿಕೆ ವ್ಯಾಪಾರದ ಹೆಸರಿನಲ್ಲಿ ಮಗಳನ್ನು ವಿದೇಶದಲ್ಲಿ ಮಾರಾಟ ಮಾಡಿರುವುದು ಹಕ್ಕಿಪಿಕ್ಕಿ ಸಮುದಾಯದ ಗೌರವಕ್ಕೆ ಧಕ್ಕೆ ತಂದಿದ್ದು, ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೇರಿದಂತೆ ಅನ್ವಯವಾಗುವ ಎಲ್ಲಾ ಕಾನೂನುಗಳಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದ್ದು, ಪ್ರಕರಣದ ಸತ್ಯಾಂಶವನ್ನು ಹೊರತಂದು ತಪ್ಪಿತಸ್ಥರನ್ನು ಕಾನೂನಿನ ಮುಂದೆ ನಿಲ್ಲಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.