ದೆಹಲಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ಚಳವಳಿಯು ದೇಶದ ರಾಜಧಾನಿಯಲ್ಲಿ ತೀವ್ರ ಹಂಗಾಮಾ ಸೃಷ್ಟಿಸಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ದಿನವೇ ನಡೆದ ಈ ಬೃಹತ್ ಪ್ರತಿಭಟನೆಯು ಪೊಲೀಸರು ಮತ್ತು ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಯಿತು.
ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜಂತರ್ ಮಂತರ್ನಿಂದ ಸಂಸತ್ ಭವನದತ್ತ ನುಗ್ಗಲು ಯತ್ನಿಸಿದ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಉಭಯ ಪಕ್ಷಗಳ ನಡುವೆ ತೀವ್ರ ತಳ್ಳಾಟ-ನೂಕಾಟ ನಡೆದಿದ್ದು, ಆಕ್ರೋಶಿತ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದರು. ಪ್ರತಿಭಟನಾಕಾರರ ಕಲ್ಲು ತೂರಾಟದಿಂದಾಗಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಂಟರ್ ಮಂತರ್ನಲ್ಲಿ ಧರಣಿಯ ನೇತೃತ್ವ ವಹಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಕೇಂದ್ರ ದೆಹಲಿ ಸಂಪೂರ್ಣ ಸ್ತಬ್ಧ
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಜಂತರ್ ಮಂತರ್, ಕಾನ್ಸ್ಟಿಟ್ಯೂಷನ್ ಕ್ಲಬ್, ರೈಲ್ ಭವನ, ಶಾಸ್ತ್ರಿ ಭವನ, ಜನಪಥ್, ಕಾನಾಟ್ ಪ್ಲೇಸ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸುತ್ತಮುತ್ತಲಿನ ಪ್ರದೇಶಗಳು ರಣರಂಗದಂತಾಗಿದ್ದವು. ಅದರಲ್ಲೂ ವಿಶೇಷವಾಗಿ ಶಾಸ್ತ್ರಿ ಭವನದ ಬಳಿ ನೆರೆದಿದ್ದ ಗುಂಪು ನಿಷೇಧಿತ ವಲಯಕ್ಕೆ ನುಗ್ಗಲು ಯತ್ನಿಸಿದಾಗ, ಅರೆಸೈನಿಕ ಪಡೆಗಳು ಕಣ್ಣೀರಿನ ಅನಿಲದ ಶೆಲ್ಗಳನ್ನು ಸಿಡಿಸಿ ಜನರನ್ನು ಚದುರಿಸಿದವು.
ಈ ದಿಢೀರ್ ಬೆಳವಣಿಗೆಯಿಂದಾಗಿ ಇಡೀ ಕೇಂದ್ರ ದೆಹಲಿಯ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು.
ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರೈಲ್ ಭವನ ಹಾಗೂ ಸಂಸತ್ತಿನ ಸುತ್ತಮುತ್ತ ದೆಹಲಿ ಪೊಲೀಸ್ ಮತ್ತು ಕೇಂದ್ರ ಅರೆಸೈನಿಕ ಪಡೆಗಳ ನೂರಾರು ಸಿಬ್ಬಂದಿಯನ್ನು ನಿಯೋಜಿಸಿ ಮೂರು ಹಂತದ ಬಿಗಿ ಭದ್ರತಾ ಕೋಟೆಯನ್ನು ನಿರ್ಮಿಸಲಾಗಿದೆ.

