ಮಂಗಳೂರು: ಗ್ರಾಹಕರ ಅನುಮತಿಯಿಲ್ಲದೆ ಆಹಾರದ ಬಿಲ್‌ನಲ್ಲಿ ಕಡ್ಡಾಯವಾಗಿ ಸೇವಾಶುಲ್ಕ (Service Charge) ವಸೂಲಿ ಮಾಡುತ್ತಿದ್ದ ದೇಶದ 41 ಪ್ರಮುಖ ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ.
ಅನುಚಿತ ವ್ಯಾಪಾರ ವಹಿವಾಟು ನಡೆಸಿದ ಆರೋಪದಡಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪ್ರಾಧಿಕಾರ, ಇದೀಗ ನಿಯಮ ಉಲ್ಲಂಘಿಸಿದ ರೆಸ್ಟೋರೆಂಟ್‌ಗಳಿಗೆ ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಮೂಲಕ ಸಾರ್ವಜನಿಕರಿಂದ ಹರಿದುಬಂದ ದೂರುಗಳನ್ನು ಆಧರಿಸಿ ಈ ತನಿಖೆ ನಡೆಸಲಾಗಿತ್ತು. ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಸ್ವಯಂಚಾಲಿತವಾಗಿ ಸೇವಾಶುಲ್ಕವನ್ನು ಸೇರಿಸಿ ಗ್ರಾಹಕರಿಂದ ಹಣ ಪಡೆಯುತ್ತಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಪ್ರಮುಖ ಕೆಫೆ ಸರಣಿ ‘ಚಾಯೋಸ್’ (Chaayos) ಸಂಸ್ಥೆಗೆ ₹50,000 ದಂಡ ವಿಧಿಸಲಾಗಿದ್ದು, ಅಕ್ರಮವಾಗಿ ಪಡೆದ ಶುಲ್ಕವನ್ನು ಗ್ರಾಹಕರಿಗೆ ಮರುಪಾವತಿಸಲು ಸೂಚಿಸಲಾಗಿದೆ.
ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್‌ನಲ್ಲಿ ಕಡ್ಡಾಯವಾಗಿ ಸೇವಾಶುಲ್ಕ ವಸೂಲಿ ಮಾಡುವಂತಿಲ್ಲ. ಇದು ಸಂಪೂರ್ಣವಾಗಿ ಗ್ರಾಹಕರ ಐಚ್ಛಿಕ ನಿರ್ಧಾರವಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಒಂದು ವೇಳೆ ಯಾವುದೇ ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಶುಲ್ಕ ಪಾವತಿಸುವಂತೆ ಒತ್ತಾಯಿಸಿದರೆ, ಗ್ರಾಹಕರು ತಕ್ಷಣವೇ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.

