ಉಡುಪಿ: ಮನೋನಿಯಾಮಕ ರುದ್ರ ದೇವರ ಸೇವೆಯಿಂದ ಆದಿವ್ಯಾಧಿಗಳು ನಾಶವಾಗುತ್ತದೆ. ಮನಸ್ಸು ಶುದ್ಧವಾಗಿರಲು ಪರಿಸರ ಸ್ವಚ್ಛವಾಗಿರಬೇಕು. ಶುಚಿತ್ವ ಇಲ್ಲದ ಕಡೆ ದೇವರು ನೆಲೆಸುವುದಿಲ್ಲ. ದೇವರ ಆರಾಧನೆಗೆ ಆಂತರಿಕ ಮತ್ತು ಬ್ಯಾಹ್ಯ ಶುದ್ಧಿ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಸುತ್ತಮುತ್ತ ಪ್ರತಿ ಭಾನುವಾರ ಶುಚಿತ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಬಾಣತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀಣೋರ್ದ್ಧಾರ ಅಂಗವಾಗಿ ಸೇವಾಪತ್ರ ಅನಾವರಣಗೊಳಿಸಿ ಮಾತನಾಡಿದರು.
ಹೊಸ ದೇವಸ್ಥಾನ ಕಟ್ಟುವುದಕ್ಕಿಂತ ಹಳೇ ದೇವಸ್ಥಾನಗಳನ್ನು ಜೀಣೋರ್ದ್ಧಾರ ಮಾಡಿದರೆ ಹೆಚ್ಚು ಲ ಸಿಗುತ್ತದೆ. ನವೀಕರಣ ಸಂದರ್ಭದಲ್ಲಿ ಹಳೇ ಶೈಲಿ ಉಳಿಸಿಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಗೆ ಪ್ರಾಚಿನ ವಾಸ್ತು ಶಿಲ್ಪವನ್ನು ಪರಿಚಯಿಸಿದಂತಾಗುತ್ತದೆ. ಹೀಗಾಗಿ ಬಾಣತೀರ್ಥ ದೇವಸ್ಥಾನವನ್ನು ಸುಣ್ಣದಗಾರೆಯಿಂದ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್, ಮಠದ ಅಧಿಕಾರಿ ನಾಗರಾಜ್ ರಾವ್ ಮತ್ತು ನಾಗರಾಜ ತಂತ್ರಿ, ಅರ್ಚಕ ಗೋಪಾಲಕೃಷ್ಣ ಭಟ್ , ಕುರ್ಕಾಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ , ಪರಶುರಾಮ ಭಜನಾ ಮಂಡಳಿ ಅಧ್ಯಕ್ಷ ಕುಳೇದು ಪ್ರಶಾಂತ ಶೆಟ್ಟಿ , ಪಾಜೈ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಆಚಾರ್ಯ, ಸುಮಾ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ರಾಕೇಶ್ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್, ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

