ಉಡುಪಿ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧರೊಬ್ಬರನ್ನು ಹೆದರಿಸಿ ಲಕ್ಷಾಂತರ ರೂ. ದೋಚಿರುವ ಸೈಬರ್ ವಂಚನೆ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಾಸುದೇವ ಪ್ರಭು (76) ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಪ್ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಮತ್ತೊಂದು ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಅದರಲ್ಲಿ 2 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿದೆ. ಈ ಬಗ್ಗೆ ನಿಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಸಾಯಂಕಾಲದೊಳಗೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು. ಬಳಿಕ ಮುಂಬೈಗೆ ಕರೆದೊಯ್ದು 45 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇಡಲಾಗುವುದು ಎಂದು ಹೆದರಿಸಿದ್ದ. ಇದರಿಂದ ತೀವ್ರ ಆತಂಕಕ್ಕೊಳಗಾದ ವಾಸುದೇವ ಪ್ರಭು ಅವರು ವಂಚಕರು ನೀಡಿದ ಅಪರಿಚಿತ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 9,29,000 ರೂ. ಹಣ ವರ್ಗಾವಣೆ ಮಾಡಿದ್ದಾರೆ. ತದನಂತರ ತಾನು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.

