ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ವಾರ್ಷಿಕ ಆಯವ್ಯಯದಲ್ಲಿ ಕ್ರೀಡಾ ಇಲಾಖೆಯಡಿ ₹5 ಕೋಟಿ ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯ ಕಂಬಳ ಅಸೋಸಿಯೇಶನ್ (ರಿ) ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರು 2025ರ ನವೆಂಬರ್ 17ರಂದು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ, ಮುಂದಿನ ಕರ್ನಾಟಕ ರಾಜ್ಯ ವಾರ್ಷಿಕ ಬಜೆಟ್‌ನಲ್ಲಿ ಕಂಬಳ ಅಭಿವೃದ್ಧಿಗೆ ₹5 ಕೋಟಿ ಅನುದಾನ ಮಂಜೂರು ಮಾಡುವಂತೆ ಸರ್ಕಾರವನ್ನು ಕೋರಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರಂಭವಾದ ಕಂಬಳ ಕ್ರೀಡೆ ಇಂದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಸೆಳೆಯುತ್ತಿದೆ. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಕ್ರೀಡೆ ರಾಜ್ಯದ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಕಂಬಳ ಅಸೋಸಿಯೇಶನ್‌ಗೆ ಸರ್ಕಾರ ಈಗಾಗಲೇ ಮಾನ್ಯತೆ ನೀಡಿರುವ ಕ್ರಮವನ್ನು ಅಭಿನಂದಿಸಿರುವ ಮನವಿದಾರರು, ಕಂಬಳದ ಸಮಗ್ರ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ ರಾಜ್ಯ ವಾರ್ಷಿಕ ಬಜೆಟ್‌ನಲ್ಲಿ ಕ್ರೀಡಾ ಇಲಾಖೆಯಡಿ ₹5 ಕೋಟಿ ಅನುದಾನ ಮೀಸಲಿಟ್ಟು ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

