ವಿಜ್ಞಾನ ಮತ್ತು ಕಲೆಯ ಸಂಗಮ: ಆಗಸ್ಟ್ 8ರಿಂದ ಬೆಂಗಳೂರಿನಲ್ಲಿ ‘QUANTUM’ ಪ್ರದರ್ಶನ ಆರಂಭ

0
6

ಬೆಂಗಳೂರು : ಸೈನ್ಸ್ ಗ್ಯಾಲರಿ ಬೆಂಗಳೂರು (Science Gallery Bengaluru) ವತಿಯಿಂದ ವಿಜ್ಞಾನ, ಕಲೆ ಮತ್ತು ಸಂಶೋಧನೆಯ ವಿಶಿಷ್ಟ ಸಂಗಮವಾಗಿರುವ ‘QUANTUM’ ಪ್ರದರ್ಶನ-ಸೀಸನ್ ಆಗಸ್ಟ್ 8, 2026ರಿಂದ ಬೆಂಗಳೂರಿನ ಬೆಳ್ಳಾರಿ ರಸ್ತೆಯ ಸೈನ್ಸ್ ಗ್ಯಾಲರಿಯಲ್ಲಿ ಆರಂಭಗೊಳ್ಳಲಿದೆ.

ಕ್ವಾಂಟಂ ವಿಜ್ಞಾನದ ಸಂಕೀರ್ಣ ಮತ್ತು ಕುತೂಹಲಕಾರಿ ಪರಿಕಲ್ಪನೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ನೇರವಾಗಿ ಗಮನಿಸಲು ಕಷ್ಟಕರವಾದ ಕ್ವಾಂಟಂ ಜಗತ್ತಿನ ಪರಿಣಾಮಗಳು, ಇಂದಿನ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಹಾಗೂ ವಾಸ್ತವದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗುತ್ತದೆ.

ಆರು ದೇಶಗಳ ಕಲಾವಿದರ ಕೃತಿಗಳು, ಆಕರ್ಷಕ ಕಲಾ ಸ್ಥಾಪನೆಗಳು (Immersive Installations), ಸಂವಾದಾತ್ಮಕ ಅನುಭವಗಳು (Interactive Experiences), ವಿಜ್ಞಾನಾಧಾರಿತ ಆಟಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಕಾರ್ಯಕ್ರಮಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ.

ವಿಜ್ಞಾನ, ಕಲೆ ಮತ್ತು ಸಾರ್ವಜನಿಕ ಸಂವಾದದ ಮೂಲಕ ಕ್ವಾಂಟಂ ವಿಜ್ಞಾನದ ಗಹನ ವಿಚಾರಗಳನ್ನು ಎಲ್ಲ ವಯೋಮಾನದ ಹಾಗೂ ವಿವಿಧ ಹಿನ್ನೆಲೆಯ ಆಸಕ್ತರಿಗೆ ತಲುಪಿಸುವ ಪ್ರಯತ್ನವನ್ನು ಈ ಪ್ರದರ್ಶನ ಒಳಗೊಂಡಿದೆ.

ಆಗಸ್ಟ್ 8, 2026ರಂದು ಬೆಂಗಳೂರಿನ ಬೆಳ್ಳಾರಿ ರಸ್ತೆಯ ಸೈನ್ಸ್ ಗ್ಯಾಲರಿ ಬೆಂಗಳೂರುನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಜ್ಞಾನಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಕಲಾವಿದರು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.