ನವದೆಹಲಿ : ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿರುವ ರುಪೈದಿಹಾ ಗಡಿ ಪೋಸ್ಟ್ ಬಳಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಹಾಗೂ ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಖಲಿಸ್ತಾನ ಪರ ಸಂಘಟನೆಯ ವಾಂಟೆಡ್ ಉಗ್ರ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸಕ್ರಿಯ ಸದಸ್ಯ ಹಾಗೂ 2023ರಲ್ಲಿ ಪಂಜಾಬ್‌ನ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಕ್ರಮ್‌ಜಿತ್ ಸಿಂಗ್ ಇದ್ದಾನೆ. ಜೊತೆಗೆ, ಪಂಜಾಬ್‌ನ ಮೋಗಾ ಜಿಲ್ಲೆಯ ಮೂಲದ ಹಾಗೂ ಅಮೆರಿಕದ ಪ್ರಜೆಯಾಗಿರುವ ಮನ್ವೀರ್ ಸಿಂಗ್ ಧಿಲ್ಲೋನ್ ಸಹ ಬಂಧನಕ್ಕೊಳಗಾಗಿದ್ದಾನೆ. ಆತ ವೀಸಾ ಇಲ್ಲದೆ ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರಿಗೆ ಅಕ್ರಮವಾಗಿ ಗಡಿ ದಾಟಲು ವಾಹನ ಹಾಗೂ ಮಾರ್ಗದರ್ಶನ ನೀಡಿದ ಆರೋಪದಡಿ ಸ್ಥಳೀಯರಾದ ಸುರೇಶ್ ಕುಮಾರ್ ಪಾಠಕ್, ದಿಲೀಪ್ ಉಪಾಧ್ಯಾಯ ಹಾಗೂ ಚಾಲಕ ರಾಹುಲ್ ಕುಮಾರ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಬಹ್ರೈಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಜೀತ್ ಶ್ರೀವಾಸ್ತವ ಮಾಹಿತಿ ನೀಡಿ, ಬಂಧಿತರು ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಗಡಿ ದಾಟಲು ಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಪ್ರಮುಖ ಇಬ್ಬರು ಆರೋಪಿಗಳ ವಿರುದ್ಧ ಪಂಜಾಬ್‌ನಲ್ಲಿ ಈಗಾಗಲೇ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅವರು ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ರುಪೈದಿಹಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
‘ವಾರಿಸ್ ಪಂಜಾಬ್ ದೇ’ ಸಂಘಟನೆಯನ್ನು 2021ರಲ್ಲಿ ದಿವಂಗತ ನಟ ಹಾಗೂ ಕಾರ್ಯಕರ್ತ ದೀಪ್ ಸಿಧು ಸ್ಥಾಪಿಸಿದ್ದು, ಬಳಿಕ ಪಂಜಾಬ್‌ನಲ್ಲಿ ಪ್ರಚೋದನಕಾರಿ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಗಳನ್ನು ಎದುರಿಸುತ್ತಿದೆ.

