ಮೂಡಿಗೆರೆಯಲ್ಲಿ ಖೋಟಾ ನೋಟು ಜಾಲ ಬಯಲು : ‘ಬಿಸರ್ವ್ ಬ್ಯಾಂಕ್’ ಹೆಸರಿನ ನಕಲಿ ನೋಟುಗಳು ಪತ್ತೆ – ಇಬ್ಬರು ಅರೆಸ್ಟ್

0
32

ಮೂಡಿಗೆರೆ : ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಜಾಲವೊಂದನ್ನು ಮೂಡಿಗೆರೆ ಠಾಣೆ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹200 ಮುಖಬೆಲೆಯ ಒಟ್ಟು ₹18,000 ಮೌಲ್ಯದ 90 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂಡಿಗೆರೆ ಪಟ್ಟಣದ ನೂತನ ಲೇಔಟ್ ಪ್ರದೇಶದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಮೂಲದ ಮಹಮದ್ ಅಲಿ ಹಾಗೂ ಮೂಡಿಗೆರೆಯ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ. ಇಬ್ಬರ ಬಳಿಯೂ ತಲಾ 45ರಂತೆ ₹200 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.

ಪ್ರಾಥಮಿಕ ತನಿಖೆಯಲ್ಲಿ, ನೋಟುಗಳ ಮೇಲೆ “Reserve Bank of India” ಬದಲಾಗಿ “Beserve Bank of India” ಎಂದು ಮುದ್ರಿಸಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಆಗಮಿಸಿದ್ದ ಮಹಮದ್ ಅಲಿ, ಈ ನಕಲಿ ನೋಟುಗಳನ್ನು ಮೂಡಿಗೆರೆಯಲ್ಲಿ ಮಾರಾಟ ಹಾಗೂ ಚಲಾವಣೆಗೆ ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಜಾಲದ ಹಿಂದೆ ಇನ್ನೂ ಯಾರು ಇದ್ದಾರೆ ಹಾಗೂ ನಕಲಿ ನೋಟುಗಳ ಮುದ್ರಣ ಎಲ್ಲಿ ನಡೆದಿತ್ತು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.