ಅಪಾಯಕಾರಿ ಮರ ತೆರವುಗೊಳಿಸಿ , ಪಂಚಾಯಿತಿ ಆವರಣ ಸ್ವಚ್ಛಗೊಳಿಸಲು : ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರ್ ಕೀಳಂಜಿ ಒತ್ತಾಯ

0
27

ಉಡುಪಿ : ಜಿಲ್ಲೆಯ ಹಾವಂಜೆ ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಅಂಗನವಾಡಿ ಕಟ್ಟಡದ ಮೇಲ್ಭಾಗದಲ್ಲಿ ಹಾದುಹೋಗಿರುವ ನಾಲ್ಕು ತಂತಿಯ ವಿದ್ಯುತ್ ಮಾರ್ಗಕ್ಕೆ ಅಪಾಯಕಾರಿ ಮರ ತಾಗಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮರ ಉರುಳಿ ಭಾರೀ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಎದುರುಗಡೆಯಲ್ಲಿರುವ ಅಂಗನವಾಡಿ ಕಟ್ಟಡದ ಸಮೀಪದಲ್ಲೇ ಪಂಚಾಯಿತಿಯ ಅಮೃತ ಸಭಾಭವನ, ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಕೊಠಡಿ ಇರುವುದರಿಂದ ಈ ಪ್ರದೇಶದಲ್ಲಿ ದಿನನಿತ್ಯ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಹಾಗೂ ಸಿಬ್ಬಂದಿ ಓಡಾಡುತ್ತಿರುತ್ತಾರೆ. ಇಂತಹ ಸ್ಥಳದಲ್ಲಿ ಅಪಾಯಕಾರಿ ಮರಗಳು ತೆರವುಗೊಳ್ಳದಿರುವುದು ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಾವಂಜೆ ಗ್ರಾಮ ಪಂಚಾಯಿತಿಯ ಅಮೃತ ಸಭಾಭವನದ ಎದುರುಗಡೆ ಮೆಟ್ಟಿಲಿನ ಮೇಲೆ ಬೀದಿ ನಾಯಿಗಳ ವಾಸ ಸ್ಥಳವಾಗಿದೆ

ಅಂಗನವಾಡಿ ಮತ್ತು ಆರೋಗ್ಯ ಕೇಂದ್ರದ ಸಿಸ್ಟರ್‌ ಅವರ ಕೊಠಡಿ ಬಳಿ ಸುಮಾರು ಐದರಿಂದ ಆರು ಅಪಾಯಕಾರಿ ಮರಗಳಿದ್ದು, ಅವುಗಳಲ್ಲಿ ಒಂದು ಮರ ನಾಲ್ಕು ತಂತಿಯ ವಿದ್ಯುತ್ ಮಾರ್ಗಕ್ಕೆ ತಾಗಿಕೊಂಡಿದೆ. ಈ ಮರ ಉರುಳಿದರೆ ವಿದ್ಯುತ್ ತಂತಿಗಳು ತುಂಡಾಗಿ ಜೀವಹಾನಿ ಹಾಗೂ ಆಸ್ತಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಇದರ ಜೊತೆಗೆ ಗ್ರಾಮ ಪಂಚಾಯಿತಿ ಆವರಣದ ಸುತ್ತಮುತ್ತ ಕಸದ ರಾಶಿ, ಬೆಳೆದಿರುವ ಹುಲ್ಲು ಹಾಗೂ ಪೊದೆಗಳು ಸ್ವಚ್ಛತೆಯ ಕೊರತೆಯನ್ನು ಎತ್ತಿ ತೋರಿಸುತ್ತಿವೆ. ಗ್ರಾಮ ಪಂಚಾಯಿತಿಯ ಕಸವನ್ನು ಸಮೀಪದ ಶೀಟಿನ ಕಟ್ಟಡದಲ್ಲಿ ರಾಶಿ ಹಾಕಲಾಗುತ್ತಿದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೀದಿ ನಾಯಿಗಳು ಕಸವನ್ನು ರಸ್ತೆಯುದ್ದಕ್ಕೂ ಎಳೆದು ಚೆಲ್ಲುತ್ತಿವೆ. ಇದರಿಂದ ದುರ್ವಾಸನೆ, ಅಸ್ವಚ್ಛತೆ ಹಾಗೂ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಗ್ರಾಮ ಪಂಚಾಯಿತಿಗೆ ಆಗಮಿಸುವ ಸಾರ್ವಜನಿಕರು, ಮಹಿಳೆಯರು, ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳು ಈ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ತಿಂಗಳುಗಳಿಂದ ಸಮಸ್ಯೆ ಮುಂದುವರಿದಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ, ಕಸದ ರಾಶಿ, ಹುಲ್ಲು ಮತ್ತು ಪೊದೆಗಳನ್ನು ಸ್ವಚ್ಛಗೊಳಿಸಿ ಗ್ರಾಮ ಪಂಚಾಯಿತಿ ಆವರಣವನ್ನು ಸುರಕ್ಷಿತ ಹಾಗೂ ಸ್ವಚ್ಛವಾಗಿಸುವಂತೆ ಹಾವಂಜೆ ಗ್ರಾಮಸ್ಥರ ಪರವಾಗಿ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರ್ ಕೀಳಂಜಿ ಅವರು ಜಿಲ್ಲಾಡಳಿತ, ಮೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.