ಕುಶಾಲನಗರ : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬೈಚನಹಳ್ಳಿ ಗ್ರಾಮದ ಕಾವೇರಿ ಬಡಾವಣೆಯಲ್ಲಿರುವ ಪುರಸಭೆಯ ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯ ಜಾಗವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾಗಿ ಮಾರ್ಪಟ್ಟಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಜಾಗವನ್ನು ಕೂಡಲೇ ಸ್ವಚ್ಛಗೊಳಿಸಿ, ತಡೆಗೋಡೆ ನಿರ್ಮಿಸಿ, ಹೊಸ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಪುರಸಭೆ ಆಡಳಿತವನ್ನು ಆಗ್ರಹಿಸಿದೆ.
ಈ ಸಂಬಂಧ ಕರವೇ ಸ್ವಾಭಿಮಾನಿ ಬಣದ ನಿಯೋಗವು ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿಗಳು, 10 ದಿನಗಳೊಳಗೆ ಜಾಗದಲ್ಲಿರುವ ಕಾಡು ಮತ್ತು ಗಿಡಗಂಟೆಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.
ಸುಮಾರು 15–20 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಪುರಸಭೆಯು 25 ರಿಂದ 30 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಿಗಳಿಗೆ ಬಾಡಿಗೆಗೆ ನೀಡಿತ್ತು. ಕಾಲಕ್ರಮೇಣ ಕಟ್ಟಡಗಳು ಶಿಥಿಲಗೊಂಡು ನಿರ್ವಹಣೆಯ ಕೊರತೆಯಿಂದ ಜಾಗ ಸಂಪೂರ್ಣ ಕಾಡಿನಿಂದ ಆವೃತವಾಗಿದೆ. ಪರಿಣಾಮ ಹಾವು, ಹಲ್ಲಿ ಸೇರಿದಂತೆ ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾತನಾಡಿ, ಅಮೂಲ್ಯ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸುವುದು ಪುರಸಭೆಯ ಜವಾಬ್ದಾರಿಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗ ಪಾಳುಬಿದ್ದಿದೆ ಎಂದು ಆರೋಪಿಸಿದರು. ಮುಖ್ಯಾಧಿಕಾರಿಗಳು ನೀಡಿರುವ ಭರವಸೆಯಂತೆ ಗಡುವಿನೊಳಗೆ ಕಾಡು ತೆರವುಗೊಳಿಸಿ, ಜಾಗದ ಸುತ್ತ ಭದ್ರವಾದ ಬೇಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್ ಮಾತನಾಡಿ, ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಜಾಗವನ್ನು ತಕ್ಷಣ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ ಎಂದರು.
ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ ಹಾಗೂ ಉಪಾಧ್ಯಕ್ಷ ಕೆ.ಎಸ್. ನಾಸಿರ್ ಮಾತನಾಡಿ, ಈ ಜಾಗವು ಪುರಸಭೆಗೆ ಉತ್ತಮ ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿದ್ದರೂ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷ ಚಂದ್ರು ಅವರು, ಹಳೆಯ ಶಿಥಿಲ ಕಟ್ಟಡವನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಜಾಗದ ಸುತ್ತ ಭದ್ರವಾದ ಕಾಂಪೌಂಡ್ ಅಥವಾ ಬೇಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಾಧಿಕಾರಿಗಳು ನೀಡಿದ 10 ದಿನಗಳ ಗಡುವಿನೊಳಗೆ ಕ್ರಮ ಕೈಗೊಳ್ಳದಿದ್ದರೆ, ಕರವೇ ಸ್ವಾಭಿಮಾನಿ ಬಣದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಸಂಚಾಲಕ ಸತೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಯ್ ಸಿಂಗ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ಕೆ.ಎಸ್. ನಾಸಿರ್, ಸಲಹೆಗಾರ ಬಿ.ಎಂ. ರವೀಂದ್ರ, ಸಂಘಟನೆಗಾರ ವಿಪಿ ಚಂದ್ರು, ಕಾರ್ಮಿಕ ಘಟಕದ ಉಪಾಧ್ಯಕ್ಷ ಮಣಿಕಂಠ ಆರ್., ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಭರತ್, ಮಹಿಳಾ ಘಟಕದ ಕೂಡಿಗೆ ವಲಯ ಅಧ್ಯಕ್ಷೆ ನಿಶಾ ಹಾಗೂ ನಂಜಪ್ಪ, ರಮೇಶ್, ಕಾರ್ತಿಕ್, ಅಂತೋನಿ, ಅನು ಡಿಸೋಜ, ಬಲವತ್ ಸಿಂಗ್, ಬಾಲರಾಜ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.

