ಭಾರೀ ಮಳೆ-ಗಾಳಿಗೆ ಮರ ಉರುಳಿ ಅವಘಡ : ಬೈಕ್ ಸವಾರ ಪವಾಡ ಸದೃಶ ಪಾರು

0
52

ಬೆಳ್ತಂಗಡಿ : ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ರಸ್ತೆ ಬದಿಯಲ್ಲಿದ್ದ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಸಮೀಪದ ಬರ್ಗುಳದಲ್ಲಿ ಶುಕ್ರವಾರ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುವನ್ನು ಶಿಶಿಲ ಗ್ರಾಮದ ದೇಣೋಡಿ ನಿವಾಸಿ ರತೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಕೊಕ್ಕಡದಿಂದ ಶಿಶಿಲ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಮರ ಭಾರೀ ಗಾಳಿ ಮತ್ತು ಮಳೆಯಿಂದ ಬೇರು ಸಮೇತ ಉರುಳಿ ಬೈಕ್ ಮೇಲೆ ಬಿದ್ದಿದೆ.

ಘಟನೆಯ ವೇಳೆ ಮರ ವಿದ್ಯುತ್ ತಂತಿಗಳ ಮೇಲೂ ಬಿದ್ದ ಪರಿಣಾಮ ಆ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಮರ ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ತಾತ್ಕಾಲಿಕ ಅಡಚಣೆ ಉಂಟಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಪಡೆಯ ಅರಸಿನಮಕ್ಕಿ–ಶಿಶಿಲ ಘಟಕದ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.

ಬಳಿಕ ಪಂಚಾಯಿತಿ ಸಿಬ್ಬಂದಿ ಹಾಗೂ ಮೆಸ್ಕಾಂನ ಪವರ್‌ಮ್ಯಾನ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ಕೈಗೊಂಡರು.

ಭಾರೀ ಮಳೆ ಮತ್ತು ಗಾಳಿಯ ಹಿನ್ನೆಲೆಯಲ್ಲಿ ರಸ್ತೆ ಬದಿಯ ಮರಗಳಿರುವ ಪ್ರದೇಶಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.