ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಸಭೆಗಳು ನಡೆದರೂ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ

0
15

ಮೂಡುಬಿದಿರೆ : ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರು, ಬಸ್ ಪ್ರಯಾಣಿಕರು ಹಾಗೂ ಅಲ್ಲಿನ ಅಂಗಡಿ ಮಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ಬಾರಿ ಸಭೆಗಳು ನಡೆದಿದ್ದರೂ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ದೊರಕಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಬಸ್ ನಿಲ್ದಾಣದಲ್ಲಿ ಬಸ್ಸುಗಳಿಗಿಂತ ಇತರೆ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಬಸ್ಸುಗಳಿಗೆ ಸರಿಯಾಗಿ ನಿಲ್ಲಲು ಜಾಗ ಸಿಗುತ್ತಿಲ್ಲ. ಕೆಲವು ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ಬಸ್ ನಿಲ್ದಾಣದಲ್ಲೇ ನಿಲ್ಲಿಸಿ ತೆರಳುವುದರಿಂದ ಪ್ರಯಾಣಿಕರು ಹಾಗೂ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅಂಗಡಿ ಮಾಲಕರು ದೂರಿದ್ದಾರೆ.

ಈ ಕುರಿತು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾವು ಪ್ರತಿ ತಿಂಗಳು ನಿಯಮಿತವಾಗಿ ಪುರಸಭೆಗೆ ಬಾಡಿಗೆ ಪಾವತಿಸುತ್ತೇವೆ. ಹಾಗಿದ್ದರೂ ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಜವಾಬ್ದಾರಿ ಪುರಸಭೆಯದ್ದೇ” ಎಂದು ಅಂಗಡಿ ಮಾಲಕರು ಆಗ್ರಹಿಸಿದ್ದಾರೆ.

ಈ ಸಮಸ್ಯೆ ಕುರಿತು ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಸ್ಥಳದಲ್ಲೇ ಹಲವು ಬಾರಿ ಸಭೆ ನಡೆಸಿದ್ದರೂ, ವರ್ಷಗಳಾದರೂ ಸಮಸ್ಯೆ ಯಥಾಸ್ಥಿತಿಯಲ್ಲೇ ಉಳಿದಿದೆ. ಇದರಿಂದ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತುತ್ತಿದ್ದಾರೆ.

ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಎಲ್ಲೆಂದರಲ್ಲಿ ಬೈಕ್ ಹಾಗೂ ಕಾರುಗಳನ್ನು ನಿಲ್ಲಿಸುವುದರಿಂದ ಬಸ್ಸುಗಳು ಸರಿಯಾದ ಸ್ಥಳದಲ್ಲಿ ನಿಲ್ಲಲು ಸಾಧ್ಯವಾಗದೆ, ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಈ ಹಿಂದೆ ದ್ವಿಚಕ್ರ ವಾಹನಗಳಿಗಾಗಿ ಪ್ರತ್ಯೇಕ ಪಾರ್ಕಿಂಗ್ ಗೆರೆಗಳನ್ನು ಹಾಕಲಾಗಿತ್ತಾದರೂ, ಗುಣಮಟ್ಟದ ಕೊರತೆಯಿಂದ ಒಂದೇ ಮಳೆಗೆ ಅವು ಮಾಯವಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನಾದರೂ ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಶಾಶ್ವತ ಪಾರ್ಕಿಂಗ್ ವ್ಯವಸ್ಥೆ, ಕಟ್ಟುನಿಟ್ಟಿನ ನಿಯಮ ಜಾರಿ ಹಾಗೂ ನಿರಂತರ ಮೇಲ್ವಿಚಾರಣೆಗೆ ಮುಂದಾಗಬೇಕು. ಇಲ್ಲವಾದರೆ “ನಮ್ಮಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ” ಎಂಬುದನ್ನು ಅವರೇ ಒಪ್ಪಿಕೊಂಡಂತಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ವರದಿ :ಜಗದೀಶ ಪೂಜಾರಿ ಕಡಂದಲೆ