ಬೆಳ್ತಂಗಡಿ ಸುಮಂತ್ ಕೊಲೆ ಪ್ರಕರಣಕ್ಕೆ ಹೊಸ ತಿರುವು – ಶಂಕಿತರ ಬ್ರೈನ್ ಮ್ಯಾಪಿಂಗ್‌ಗೆ ಸಿದ್ಧತೆ

0
4

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ 15 ವರ್ಷದ ಶಾಲಾ ವಿದ್ಯಾರ್ಥಿ ಸುಮಂತ್ ಅಸಹಜ ಸಾವು ಪ್ರಕರಣದ ತನಿಖೆಗೆ ಹೊಸ ತಿರುವು ದೊರೆತಿದ್ದು, ಶಂಕಿತ ಆರೋಪಿಗಳ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕಳೆದ ಜನವರಿಯಲ್ಲಿ ಧನುರ್ಮಾಸ ಪೂಜೆಗಾಗಿ ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿದ್ದ ಸುಮಂತ್ ಮನೆಗೆ ವಾಪಸಾಗಿರಲಿಲ್ಲ. ಕುಟುಂಬಸ್ಥರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದ ವೇಳೆ ಮನೆಯ ಸಮೀಪದ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಚಿರತೆ ದಾಳಿ ಅಥವಾ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು.

ಆದರೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸುಮಂತ್ ತಲೆಯ ಹಿಂಭಾಗಕ್ಕೆ ಬಲವಾದ ಆಯುಧದಿಂದ ಮೂರು ಬಾರಿ ಹೊಡೆದಿರುವುದು ಬೆಳಕಿಗೆ ಬಂದಿದ್ದು, ಇದು ಕೊಲೆ ಪ್ರಕರಣ ಎಂಬುದು ದೃಢಪಟ್ಟಿತ್ತು. ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರೂ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ.

ತನಿಖೆಯ ವೇಳೆ ಮೃತದೇಹ ಪತ್ತೆಯಾದ ಕೆರೆಯಿಂದ ಸುಮಂತ್ ಹಿಡಿದುಕೊಂಡು ಹೋಗಿದ್ದ ಟಾರ್ಚ್ ಹಾಗೂ ಕೊಲೆಗೆ ಬಳಸಿರಬಹುದಾದ ಶಂಕೆಯ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ಸತ್ಯಾಂಶ ಬಹಿರಂಗವಾಗಬೇಕೆಂಬ ಉದ್ದೇಶದಿಂದ ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ಮಾವ ಲಕ್ಷ್ಮೀನಾರಾಯಣ ಹಾಗೂ ಸೋದರ ಮಾವ ರಾಧಾಕೃಷ್ಣ ಅವರು ಮಂಪರು/ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಕುಟುಂಬಸ್ಥರ ಮನವಿ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ತನಿಖೆಯ ಮುಂದಿನ ಹಂತವಾಗಿ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದು, ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ತನಿಖೆಗೆ ಮತ್ತೆ ಚೈತನ್ಯ ದೊರೆತಂತಾಗಿದೆ.