ಬಿಲ್ಲವ ಸಂಘ ಕಡಂದಲೆ–ಪಾಲಡ್ಕದಲ್ಲಿ ‘ಆಟಿಡೊಂಜಿ ದಿನ’ ಸಂಭ್ರಮ ಅದ್ದೂರಿಯಾಗಿ ಆಚರಣೆ

0
29

ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕಡಂದಲೆ–ಪಾಲಡ್ಕ ಇವರ ಆಶ್ರಯದಲ್ಲಿ ‘ಆಟಿಡೊಂಜಿ ದಿನ – ಪನ್ಪಿನ ಪೊರ್ಲು ಲೇಸ್’ ಕಾರ್ಯಕ್ರಮವು ಭಾನುವಾರ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಲ್ಲವ ಸಂಘ ಸೇವಾದಳದ ಅಧ್ಯಕ್ಷರು, “ತುಳುನಾಡಿನಲ್ಲಿ ಆಟಿ ತಿಂಗಳು ಅತ್ಯಂತ ವಿಶೇಷವಾದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿದೆ. ಈ ತಿಂಗಳಲ್ಲಿ ಪ್ರಕೃತಿಗೆ ಗೌರವ ಸಲ್ಲಿಸುವುದು, ದೇವರ ಆರಾಧನೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು, ಔಷಧೀಯ ಸಸ್ಯಗಳ ಬಳಕೆ ಹಾಗೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಸಂಪ್ರದಾಯಗಳನ್ನು ಆಚರಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆಟಿ ತಿಂಗಳು ನಮ್ಮ ಪೂರ್ವಜರ ಪರಂಪರೆ, ಜನಪದ ಆಚರಣೆಗಳು ಹಾಗೂ ಒಗ್ಗಟ್ಟಿನ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪವಿತ್ರ ಕಾಲವಾಗಿದೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಮ್ಮ ಸಂಘವು ‘ಆಟಿಡೊಂಜಿ ದಿನ – ಪನ್ಪಿನ ಪೊರ್ಲು ಲೇಸ್’ ಕಾರ್ಯಕ್ರಮವನ್ನು ಆಯೋಜಿಸಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷರಾದ ಶಿವರಾಮ್ ಅಮೀನ್, ಸಂಘದ ಅಧ್ಯಕ್ಷರಾದ ಲೀಲಾದರ್ ಪೂಜಾರಿ, ಸೇವಾದಳದ ಅಧ್ಯಕ್ಷರಾದ ಸೀತಾರಾಮ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಗಣೇಶ್, ಪ್ರಮೋದ್ ಸಾಲ್ಯಾನ್, ವೆಂಕಟೇಶ್ ಕೋಟ್ಯಾನ್, ಮೂಡುಬಿದಿರೆ ಯುವಾಹಿನಿ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಜಯ ಪೂಜಾರಿ, ನಾರಾಯಣ ಪೂಜಾರಿ, ಲಕ್ಷ್ಮಣ ನಾಯ್ಕ ಪುತ್ತಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮೂಡುಬಿದಿರೆ ತಾಲೂಕು ಸಂಪಿಗೆ ವಲಯದ ಮೇಲ್ವಿಚಾರಕರಾದ ಶ್ರೀನಿವಾಸ ಗೌಡ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷೆ ಲೀಲಾ ಪೂಜಾರ್ತಿ ಕಡಂದಲೆ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಚಟುವಟಿಕೆಗಳು, ಆಟೋಟಗಳು ಮತ್ತು ಸ್ನೇಹಸಮ್ಮಿಲನದ ಮೂಲಕ ಆಟಿ ತಿಂಗಳ ವೈಶಿಷ್ಟ್ಯವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.