ಗುರ್ಮೆ ಹರೀಶ್ ಶೆಟ್ಟಿ ಶ್ರೀದೇವಿ ಯಕ್ಷಕಲಾ ನಿಲಯದ ಗೌರವಾಧ್ಯಕ್ಷರಾಗಿ ನಿಯುಕ್ತಿ

0
57

ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ತುಂಬಲಿದೆ: ಶಶಿಧರ ಶೆಟ್ಟಿ ಇನ್ನಂಜೆ

ನಾಲಾಸೋಪಾರ: ಶ್ರೀದೇವಿ ಯಕ್ಷಕಲಾ ನಿಲಯ, ವಿರಾರ್–ನಾಲಾಸೋಪಾರ ಇದರ ದಶಮಾನೋತ್ಸವದ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ಕಾರ್ಯಕ್ರಮಗಳು, ದಶಮಾನೋತ್ಸವದ ಸಿದ್ಧತೆಗಳು ಹಾಗೂ ವಿವಿಧ ಚಟುವಟಿಕೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಸಮಾಜಮುಖಿ ಚಿಂತನೆಯುಳ್ಳ ಉದ್ಯಮಿ ಹಾಗೂ ಕೊಡುಗೈದಾನಿ ಗುರ್ಮೆ ಹರೀಶ್ ಶೆಟ್ಟಿ ಅವರನ್ನು ಶ್ರೀದೇವಿ ಯಕ್ಷಕಲಾ ನಿಲಯದ ಗೌರವಾಧ್ಯಕ್ಷರಾಗಿ ನಿಯುಕ್ತಿಗೊಳಿಸಲಾಯಿತು.

ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಗುರ್ಮೆ ಹರೀಶ್ ಶೆಟ್ಟಿ ಅವರ ಅನುಭವ, ಮಾರ್ಗದರ್ಶನ ಮತ್ತು ಸಹಕಾರವು ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಯಕ್ಷಗಾನ, ಭರತನಾಟ್ಯ, ಭಜನೆ, ಕನ್ನಡ ಕಲಿಕೆ ಸೇರಿದಂತೆ ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರೀದೇವಿ ಯಕ್ಷಕಲಾ ನಿಲಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ಗುರ್ಮೆ ಹರೀಶ್ ಶೆಟ್ಟಿ ಅವರು ಗೌರವಾಧ್ಯಕ್ಷರಾಗಿ ಸೇರ್ಪಡೆಯಾಗಿರುವುದು ಸಂಸ್ಥೆಗೆ ವಿಶೇಷ ಗೌರವ ತಂದಿದೆ ಎಂದು ಶಶಿಧರ ಶೆಟ್ಟಿ ಇನ್ನಂಜೆ ತಿಳಿಸಿದ್ದಾರೆ.