ಮೂಡುಬಿದಿರೆ : ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಎದುರಾದ ದುರ್ಘಟನೆಗಳ ನಡುವೆಯೂ ಮಗನ ಬದುಕನ್ನು ಉಳಿಸಿಕೊಳ್ಳಲು ತಾಯಿಯೊಬ್ಬರು ನಡೆಸುತ್ತಿರುವ ಹೋರಾಟ ಮನಕಲಕುವಂತಿದೆ. ಮೂಡುಬಿದಿರೆ ಸಮೀಪದ ತಾಕೊಡೆಯ ಲಿಲ್ಲಿ ಡಿ’ಸೋಜಾ ಅವರು ಪತಿಯನ್ನು ಕಳೆದುಕೊಂಡ ನೋವಿನಲ್ಲೇ ಈಗ ಏಕೈಕ ಪುತ್ರ ಮೆಲ್ಬನ್ ಜೀವನ್ ಮಸ್ಕರೇನ್ಹಸ್ ಅವರ ಚಿಕಿತ್ಸೆಗೆ ಸಮಾಜದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಮೆಲ್ಬನ್ ಗಂಭೀರ ಕಿಡ್ನಿ ವೈಫಲ್ಯ, ಪೈಲೊನೆಫ್ರೈಟಿಸ್, ಸೆಪ್ಸಿಸ್ ಹಾಗೂ ಸೆಪ್ಟಿಕ್ ಶಾಕ್‌ನಿಂದ ಬಳಲುತ್ತಿದ್ದು, ಕಳೆದ ಜೂನ್ 27ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ನಿಗಾದಲ್ಲಿರುವ ಅವರಿಗೆ ತುರ್ತು ಚಿಕಿತ್ಸೆಯೊಂದಿಗೆ ಬಲವಾದ ಆಂಟಿಬಯೋಟಿಕ್‌ಗಳು ಮತ್ತು ಇನೋಟ್ರೋಪಿಕ್ ಬೆಂಬಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜೀವನಪರ್ಯಂತ ಇಮ್ಯುನೊಸಪ್ರೆಸೆಂಟ್ ಔಷಧಿಗಳನ್ನು ಸೇವಿಸಬೇಕಿದ್ದು, ಇದಕ್ಕಾಗಿಯೇ ತಿಂಗಳಿಗೆ ₹12 ಸಾವಿರದಿಂದ ₹15 ಸಾವಿರದವರೆಗೆ ವೆಚ್ಚವಾಗಲಿದೆ.
ಈ ಕುಟುಂಬಕ್ಕೆ ಸಂಕಷ್ಟ ಹೊಸದೇನಲ್ಲ. ರಕ್ತದ ಕ್ಯಾನ್ಸರ್‌ನಿಂದ ಪತಿ ಮೆಲ್ವಿನ್ ರೊನಾಲ್ಡ್ ಮಸ್ಕರೇನ್ಹಸ್ ಅವರನ್ನು ಕಳೆದುಕೊಂಡ ಲಿಲ್ಲಿ ಡಿ’ಸೋಜಾ, ಇದಕ್ಕೂ ಮೊದಲು ಎರಡು ತಿಂಗಳ ಪ್ರಾಯದಲ್ಲೇ ಕಿಡ್ನಿ ವೈಫಲ್ಯದಿಂದ ಮಗಳನ್ನು ಕಳೆದುಕೊಂಡಿದ್ದರು. ಈಗ ಅದೇ ರೀತಿಯ ಅನಾರೋಗ್ಯ ಏಕೈಕ ಪುತ್ರನನ್ನೂ ಕಾಡುತ್ತಿರುವುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಆರೋಗ್ಯ ಸಮಸ್ಯೆಗಳು ಬಾಲ್ಯದಿಂದಲೇ ಬೆನ್ನಟ್ಟಿದರೂ ಮೆಲ್ಬನ್ ಶಿಕ್ಷಣದಲ್ಲಿ ಹಿಂದೆ ಬೀಳಲಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92ಕ್ಕೂ ಅಧಿಕ ಅಂಕಗಳನ್ನು ಗಳಿಸಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾನೆ. ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಕನಸು ಕಂಡಿದ್ದ ಈ ವಿದ್ಯಾರ್ಥಿಯ ಬದುಕು ಈಗ ಆಸ್ಪತ್ರೆಯ ಹಾಸಿಗೆಯಲ್ಲೇ ಸೀಮಿತವಾಗಿದೆ. “ನಾನು ಗುಣಮುಖನಾಗಿ ಮತ್ತೆ ಓದಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು” ಎಂಬ ಅವನ ಆಸೆ ಇನ್ನೂ ಜೀವಂತವಾಗಿದೆ.
ಪತಿಯ ನಿಧನದ ಬಳಿಕ ಕುಟುಂಬದ ಸಂಪೂರ್ಣ ಜವಾಬ್ದಾರಿ ಲಿಲ್ಲಿ ಅವರ ಮೇಲಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ಅವರು ಮಗನನ್ನು ಒಬ್ಬಂಟಿಯಾಗಿ ಬಿಟ್ಟು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಆಸ್ಪತ್ರೆಯಲ್ಲೇ ದಿನ ಕಳೆಯುತ್ತಿದ್ದಾರೆ. ಚಿಕಿತ್ಸೆಯ ವೆಚ್ಚ ಮಾತ್ರವಲ್ಲದೆ ದೈನಂದಿನ ಖರ್ಚನ್ನೂ ನಿಭಾಯಿಸುವುದು ಅವರಿಗೆ ದೊಡ್ಡ ಸವಾಲಾಗಿದೆ.
ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಯೂ ದುಬಾರಿಯಾಗಲಿದೆ. ಪ್ರತಿಭಾವಂತ ವಿದ್ಯಾರ್ಥಿಯ ಬದುಕು ಮತ್ತೆ ಹಸನಾಗಬೇಕು, ತಾಯಿಯ ಹೋರಾಟಕ್ಕೆ ಸಮಾಜ ಬೆಂಬಲವಾಗಬೇಕು ಎಂಬ ಆಶಯದೊಂದಿಗೆ ಕುಟುಂಬವು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ. ಸಣ್ಣ ಸಹಾಯವೂ ಈ ಕುಟುಂಬದ ಬದುಕಿನಲ್ಲಿ ಹೊಸ ಭರವಸೆಯ ಬೆಳಕಾಗಬಹುದು.

ವಿಶೇಷ ವರದಿ : ಜಗದೀಶ್ ಪೂಜಾರಿ, ಕಡಂದಲೆ

