ಮೇಲಂಗಡಿ ಗೆಳೆಯರ ಬಳಗ ಹಾಗೂ ಹಿಂಜಾವೇ ಸಹಭಾಗಿತ್ವದಲ್ಲಿ ಸೆ.05 &06 ಬೋಳದ ಅಷ್ಟಮಿ

0
126

ಬೋಳ: ಮೇಲಂಗಡಿ ಗೆಳೆಯರ ಬಳಗ, ಬೋಳ ಹಾಗೂ ಹಿಂದೂ ಜಾಗರಣ ವೇದಿಕೆ, ಬೋಳ ಇವರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಸೆಪ್ಟೆಂಬರ್ 5 ಮತ್ತು 6ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ಆಯೋಜಿಸಲಾಗಿದೆ.

ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಗೋ ಪೂಜೆ, ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ, ಸಂಗೀತ ಕಾರ್ಯಕ್ರಮ, ನೃತ್ಯ ವೈಭವ, ಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕ ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 5ರಂದು ನಡೆಯುವ ಕಾರ್ಯಕ್ರಮ

ಸೆ. 5ರಂದು ಶನಿವಾರ ಸಂಜೆ 4 ಗಂಟೆಗೆ ಗೋ ಪೂಜೆ, ಸಂಜೆ 4.30ಕ್ಕೆ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಡೆಯಲಿದೆ. ನಂತರ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಕಲಾವಿದ ಶ್ರೀ ಸಚಿತ್ ಪೂಜಾರಿ ಅವರಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ತುಳು ಸಿರಿ ಸಾಂಸ್ಕೃತಿಕ ಕಲಾ ಬಳಗದ ಜೊತೆಗೂಡಿ ‘Step Zone Dance Studio’ ವತಿಯಿಂದ ‘ನೃತ್ಯ ವೈಭವ’ ಪ್ರದರ್ಶನ ನಡೆಯಲಿದೆ.

ಸೆಪ್ಟೆಂಬರ್ 6ರಂದು ಕೃಷ್ಣ ವೇಷ ಸ್ಪರ್ಧೆ

ಸೆ. 6ರಂದು ರವಿವಾರ ಬೆಳಗ್ಗೆ 8.30ಕ್ಕೆ ‘ಕೃಷ್ಣ ವೇಷ ಸ್ಪರ್ಧೆ’ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಕ್ರೀಡಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಬಳಿಕ ಸಾರ್ವಜನಿಕ ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.

ಪುರುಷರಿಗೆ ಹಗ್ಗ ಜಗ್ಗಾಟ ಹಾಗೂ ವಾಲಿಬಾಲ್, ಮಹಿಳೆಯರಿಗೆ ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ಭಜನಾ ಮಂಡಳಿಗಳಿಂದ ಭಕ್ತಿಗೀತೆ ಹಾಗೂ ಭಜನಾ ಸೇವೆ ನಡೆಯಲಿದೆ.

ಸಂಜೆ 6.30ಕ್ಕೆ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೋಳದಗುತ್ತು ಸತೀಶ್ ಶೆಟ್ಟಿ ಹಾಗೂ ಶ್ರೀ ಜಗದೀಶ ಶೆಟ್ಟಿ ಅವರ ದೋನಿ ಮತ್ತು ಬೊಲ್ಲ ಕೋಣಗಳಿಗೆ ವಿಶೇಷ ಸನ್ಮಾನ ನೆರವೇರಿಸಲಾಗುವುದು.

ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 7-30ರಿಂದ ಸಾಯಿ ಶಕ್ತಿ ಕಲಾಬಳಗ ಮಂಗಳೂರು ಇವರಿಂದ “ಜೋಡುಜೀಟಿಗೆ” ಅದ್ಧೂರಿ ತುಳು ನಾಟಕ ಪ್ರದರ್ಶನ ನಡೆಯಲಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಎರಡು ದಿನಗಳ ಕಾಲ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು, ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮೇಲಂಗಡಿ ಗೆಳೆಯರ ಬಳಗ, ಬೋಳ ಹಾಗೂ ಹಿಂದೂ ಜಾಗರಣ ವೇದಿಕೆ, ಬೋಳದ ಸಂಘಟಕರು ಮನವಿ ಮಾಡಿದ್ದಾರೆ.