ಯುವಕರಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಸೋಂಕಿಗೆ ಬ್ರೇಕ್; ಕಾಲೇಜುಗಳಲ್ಲಿ ವಿಶೇಷ ತಪಾಸಣೆ ಅಭಿಯಾನ

0
94

ಬೆಂಗಳೂರು : ರಾಜ್ಯದ ಯುವ ಸಮುದಾಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹೆಚ್‌ಐವಿ (HIV) ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸುವ ವಿಶೇಷ ಅಭಿಯಾನ ಆರಂಭಿಸಲು ಇಲಾಖೆ ತೀರ್ಮಾನಿಸಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ಹೆಚ್‌ಐವಿ ಸೋಂಕಿತರು ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದು, ಅವರಲ್ಲಿ 2.05 ಲಕ್ಷಕ್ಕೂ ಹೆಚ್ಚು ಮಂದಿ ಆಂಟಿ ರೆಟ್ರೋ ವೈರಲ್ ಥೆರಪಿ (ART) ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ, 18ರಿಂದ 35 ವರ್ಷದೊಳಗಿನ ಯುವಜನರಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ 18ರಿಂದ 25 ವರ್ಷದ ವಯೋಮಾನದ ಸುಮಾರು 7 ಸಾವಿರ ಯುವಕ-ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ. ಇದಲ್ಲದೆ, ಸುಮಾರು 54 ಸಾವಿರ ಮಂದಿಗೆ ತಮಗೆ ಹೆಚ್‌ಐವಿ ಸೋಂಕು ತಗುಲಿರುವುದೇ ಗೊತ್ತಿಲ್ಲ ಎಂಬುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳು ಯಾವುದೇ ರೀತಿಯ ಮುಜುಗರ ಅಥವಾ ಭಯವಿಲ್ಲದೆ ಪರೀಕ್ಷೆಗೆ ಒಳಗಾಗುವಂತೆ ಮಾಡಲು ಆರೋಗ್ಯ ಇಲಾಖೆ ಸಂಪೂರ್ಣ ಗೌಪ್ಯತೆಗೆ ಆದ್ಯತೆ ನೀಡಿದೆ. ಇದರ ಭಾಗವಾಗಿ ‘ನಿಮ್ಮ ಹೆಚ್‌ಐವಿ ಸ್ಥಿತಿ ತಿಳಿದುಕೊಳ್ಳಿ’ ಎಂಬ ವಿಶೇಷ QR ಕೋಡ್ ಆಧಾರಿತ ಸ್ವಯಂ ಅಪಾಯ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು QR ಕೋಡ್ ಸ್ಕ್ಯಾನ್ ಮಾಡಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡೇ ಸೋಂಕಿನ ಅಪಾಯದ ಮಟ್ಟವನ್ನು ಸ್ವತಃ ಪರಿಶೀಲಿಸಿಕೊಳ್ಳಬಹುದಾಗಿದೆ.

ಈ ಅಭಿಯಾನದ ಮೂಲಕ ಸೋಂಕನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದರ ಜೊತೆಗೆ, ಯುವಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದು ಆರೋಗ್ಯ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯ ಈ ಮಹತ್ವದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಇಲಾಖೆ ಮನವಿ ಮಾಡಿದೆ.