ಪುತ್ತೂರು : ಅಖಿಲ ಭಾರತ ದೈವಾರಾಧಕರ ಒಕ್ಕೂಟ ಕೇಂದ್ರೀಯ (ರಿ.), ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ, ದೈವಾರಾಧನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೈವಚಾಕ್ರಿಗಳ ಕಲ್ಯಾಣ ಹಾಗೂ ತುಳುನಾಡಿನ ದೈವಾರಾಧನಾ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಹಲವು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯಲ್ಲಿ, ತುಳುನಾಡಿನ ದೈವಾರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು 10 ರಿಂದ 20 ಸಾವಿರ ದೈವಚಾಕ್ರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ 16 ವರ್ಗದ ದೈವಚಾಕ್ರಿಗಳನ್ನು ಸರ್ಕಾರದ ಸಂಬಂಧಿತ ಇಲಾಖೆಯ ವ್ಯಾಪ್ತಿಗೆ ಸೇರಿಸಿ, ಅವರಿಗೆ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ, 60 ವರ್ಷ ಮೇಲ್ಪಟ್ಟ ದೈವಚಾಕ್ರಿಗಳಿಗೆ ಮಾಸಿಕ ಗೌರವಧನ, ಆರೋಗ್ಯ ವಿಮೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ದೈವಾರಾಧನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ, ಈ ಪಾರಂಪರಿಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಸರ್ಕಾರ ನೆರವಾಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ತುಳುನಾಡಿನ ದೈವಾರಾಧನೆಯಲ್ಲಿ ಪ್ರಮುಖವಾಗಿ ಬಳಸುವ ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ ರಾಷ್ಟ್ರೀಯ ಮಾನ್ಯತೆ ನೀಡಬೇಕು ಎಂಬ ಬೇಡಿಕೆಯನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದಲ್ಲದೆ, ಸರ್ಕಾರಿ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ವೇದಿಕೆಗಳು ಹಾಗೂ ಮೆರವಣಿಗೆಗಳಲ್ಲಿ ದೈವಾರಾಧನೆಗೆ ಸಂಬಂಧಿಸಿದ ವೇಷಭೂಷಣಗಳನ್ನು ಹಾಸ್ಯಾಸ್ಪದವಾಗಿ ಬಳಸುವುದನ್ನು ಸಂಪೂರ್ಣ ನಿಷೇಧಿಸಿ, ಅದಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಶೀಘ್ರ ಪರಿಶೀಲಿಸಿ, ದೈವಚಾಕ್ರಿಗಳಿಗೆ ಸೂಕ್ತ ಸ್ಥಾನಮಾನ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕ ಅಶೋಕ್ ರೈ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಕೇಂದ್ರೀಯ ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಉಪಾಧ್ಯಕ್ಷ ನವೀನ್ ಪಾತ್ರಿ, ವಾಸು ಶೇರಿಗಾರ, ಘಟಕದ ಅಧ್ಯಕ್ಷ ಸುಂದರ ಪೂಜಾರಿ, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ಖಜಾಂಚಿ ಸಮಿತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಬಾಲಚಂದ್ರ ಪೂಜಾರಿ, ಕೃಷ್ಣ ಪೂಜಾರಿ ಅಂಜಾರು, ರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

