ಮಂಗಳೂರು : ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಜುಲೈ 29ರಂದು ನಡೆಯಲಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಕಲಾ, ಸಂಸ್ಕೃತಿ, ಸಮಾಜಸೇವೆ ಹಾಗೂ ದೈವಾರಾಧನೆ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಐವರು ಹಿರಿಯ ಸಾಧಕರಿಗೆ ಅವರ ನಿವಾಸದಲ್ಲೇ ತೆರಳಿ ಗೌರವ ಸಮರ್ಪಿಸಲಾಗುವುದು.
ಕಳೆದ 22 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಿರಿಯ ಕಲಾವಿದರು, ಕಲಾ ಸಂಘಟಕರು ಹಾಗೂ ಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯವನ್ನು ಸಂಸ್ಕಾರ ಭಾರತೀ ಮುಂದುವರಿಸಿಕೊಂಡು ಬಂದಿದೆ. ಈ ವರ್ಷವೂ ಸಾಧಕರ ಮನೆಗೆ ತೆರಳಿ ಆತ್ಮೀಯವಾಗಿ ಗುರುನಮನ ಸಲ್ಲಿಸಿ, ಅವರ ಜೀವನ ಸಾಧನೆಯನ್ನು ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಾರಿ ಗೌರವಕ್ಕೆ ಭಾಜನರಾಗಿರುವವರು:
- ಮಣ್ಣಗುಡ್ಡೆ ಯೋಗೀಶ್ ಆಚಾರ್ (79) – ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಸಹಾಯಕ ಕಾರ್ಯದರ್ಶಿ, ಸಮಾಜಸೇವಕ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿರುವ ಹಿರಿಯ ವ್ಯಕ್ತಿತ್ವ.
- ಕೃಷ್ಣ ಯಾನೆ ರಮೇಶ್ ಕರ್ಕೇರಾ (70) – ಕುಸ್ತಿ ತರಬೇತುದಾರ, ಗರಡಿ ಪರಂಪರೆಯ ಉಳಿವಿಗೆ ಶ್ರಮಿಸಿದ ಹಿರಿಯ ಕ್ರೀಡಾಪಟು ಹಾಗೂ ಹುಲಿವೇಷದ ಮುಖವಾಡ ತಯಾರಿಕೆಯಲ್ಲಿ ಪರಿಣತಿ ಹೊಂದಿದ ಕಲಾವಿದ.
- ಗುಣವತಿ ಜೆ. (70) – ಸಂಗೀತ, ನೃತ್ಯ, ಭಜನೆ, ಲಲಿತಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಸಾಧಕಿ.
- ಮಿಜಾರು ಮೋಹನ ಶೆಟ್ಟಿಗಾರ್ (75) – ನಾಲ್ಕು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಪ್ರಧಾನ ಮದ್ದಳೆಗಾರರಾಗಿ ಸೇವೆ ಸಲ್ಲಿಸಿ ಅಪಾರ ಹೆಸರು ಗಳಿಸಿರುವ ಹಿರಿಯ ಕಲಾವಿದ.
- ಕೃಷ್ಣಪ್ಪ ಸಾಲಿಯಾನ್ (72) – ತುಳುನಾಡಿನ ದೈವಾರಾಧನೆ, ನೇಮ-ಕೋಲ, ದೈವಗಳ ಅಣಿ-ಅಲಂಕಾರ ಹಾಗೂ ಪಾಡ್ದನ ಪರಂಪರೆಯ ಸಂರಕ್ಷಣೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ದೈವಾರಾಧಕ.
ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು, ಸಮಾಜಸೇವಕರು, ಜನಪ್ರತಿನಿಧಿಗಳು ಹಾಗೂ ಸಂಸ್ಕಾರ ಭಾರತೀ ಪ್ರಮುಖರು ಸಾಧಕರ ನಿವಾಸಗಳಿಗೆ ಭೇಟಿ ನೀಡಿ ಗೌರವ ಸಮರ್ಪಿಸಲಿದ್ದಾರೆ. ನಿಟ್ಟೆ ವಿದ್ಯಾಸಂಸ್ಥೆಗಳ ವತಿಯಿಂದ ನಗದು ಪುರಸ್ಕಾರ ಹಾಗೂ ಸನ್ಮಾನ ಪತ್ರ ಪ್ರದಾನ ಮಾಡಲಾಗುವುದು.
ಈ ಕುರಿತು ಸಂಸ್ಕಾರ ಭಾರತೀ ಮಂಗಳೂರು ಮಹಾನಗರದ ಉಪಾಧ್ಯಕ್ಷ ಧನ್‌ಪಾಲ್ ಶೆಟ್ಟಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
