ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹೆತ್ತವರ ಪಾತ್ರ ದೊಡ್ಡದು

0
12

ಮೂಡುಬಿದಿರೆ : ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮನೆಯೇ ರಾಷ್ಟ್ರೀಯತೆಯ ಮೊದಲ ಪಾಠ ಶಾಲೆಯಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಸಮಿತ್ ರಾಜ್ ಅವರು ಹೇಳಿದರು.

ಇಲ್ಲಿನ ಅಚ್ಚರಕಟ್ಟೆಯ ಸುಮುಖ ಭಜನಾ ಮಂಡಳಿ ಮತ್ತು ಮೂಡುಬಿದಿರಿ ತಾಲ್ಲೂಕು ಹಿಂದೂ ಜಾಗರಣ ವೇದಿಕೆಯ ಸಹಭಾಗಿತ್ವದಲ್ಲಿ ದಯಾನಂದ ಪೈ ಮತ್ತು ಉಷಾ ಡಿ ಪೈ ಕಲಾ ವೇದಿಕೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಅವರು ಮಾತನಾಡಿದರು.

ಹಿಂದೂಗಳ ಮೇಲೆ ಹಾಗೂ ಸನಾತನ ಸಂಸ್ಕೃತಿ, ಭಾವನೆಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಅವರು ತೀವ್ರವಾಗಿ ಖಂಡಿಸಿ,ಪಕ್ಷ ಬೇಧ ಮರೆತು ಹಿಂದೂಗಳು ಜಾಗ್ರತರಾಗಬೇಕಿದೆ ಎಂದು ಹೇಳಿದರು.

ಸುಮುಖ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಪಡುಮಾರ್ನಾಡು ದಯಾನಂದ ಪೈಗಳು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ನೀಡಿದ ಭೂಮಿ ಎರಡೂ ಶ್ರೇಷ್ಠವಾದದ್ದು ಎಂದು ಭಗವಾನ್ ಶ್ರೀರಾಮನ ಮಾತನ್ನು ಉಲ್ಲೇಖಸುತ್ತಾ ತಮ್ಮ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ದಾಮೋದರ ಸಾವರ್ಕರ್,ಶುಭಾಸ್ಚಂದ್ರ ಭೋಸ್,ಬಾಲ ಗಂಗಾಧರ ತಿಲಕ್ ಮತ್ತಿತರ ಸ್ವಾತಂತ್ರ್ಯ ವೀರರನ್ನು ಸ್ಮರಿಸಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಾಲ್ಯದಿಂದಲೇ ರಾಷ್ಟ್ರೀಯತೆಯನ್ನು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಹ ಸಂಯೋಜಕ ಸಂತೋಷ್ ಕುಮಾರ್ ಜೈನ್ ಬನ್ನಡ್ಕ,ಸುಮುಖ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಉಮಾವತಿ ಬಿ ಬಂಗೇರ, ಸುಂದರ ಪೂಜಾರಿ,ಸೌಮ್ಯ,ಸಂದೀಪ್ ಹೆಗ್ಡೆ, ಉದಯ, ಭಜನಾ ತರಭೇತುದಾರರಾದ ಪ್ರವೀಣ್ ಸಾಲ್ಯಾನ್ ಮತ್ತು ಲಕ್ಶ್ಮಣ ನಾಯ್ಕ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ವಿದ್ಯಾರ್ಥಿ ಮಕ್ಕಳು, ಪೋಷಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಹರಿಶ್ಚಂದ್ರ ಕೆ.ಪಿ ಸ್ವಾಗತಿಸಿದರು.ಸ್ಮಿತಾ ವಂದಿಸಿದರು.