ವಿದ್ಯಾಗಿರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ದಂತ ಚಿಕಿತ್ಸಾ ಶಿಬಿರ

0
1

ತಮ್ಮೂರಿನ ಮಕ್ಕಳ ಆರೋಗ್ಯದ ಕಾಳಜಿಗೆ ಅಮರಶ್ರೀ ಅಮರನಾಥ ಶೆಟ್ಟಿ ಅವರ ವಿಶೇಷ ಕಾಳಜಿ

ಕಡಂದಲೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.), ಮೂಡಬಿದಿರೆ ಹಾಗೂ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ, ನಿಟ್ಟೆ ವಿಶ್ವವಿದ್ಯಾಲಯ, ದೇರಳಕಟ್ಟೆ, ಮಂಗಳೂರು ಇವರ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ, ಕಡಂದಲೆಯಲ್ಲಿ ಮಕ್ಕಳಿಗಾಗಿ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ ಶನಿವಾರ ನಡೆಯಿತು
ಶಿಬಿರವನ್ನು ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ರೂವಾರಿ ಪ್ರೊ. ಡಾ. ಅಮರಶ್ರೀ ಅಮರನಾಥ ಶೆಟ್ಟಿ ಹಾಗೂ ಡಾ. ದ್ರಶಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ ಪೂಪಾಡಿಕಲ್ಲು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ತಮ್ಮ ತಂದೆ, ಮಾಜಿ ಸಚಿವ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸೇವಾ ಮನೋಭಾವದಿಂದ ಪ್ರೇರಣೆ ಪಡೆದು, ತಮ್ಮದೇ ಊರಾದ ಪಾಲಡ್ಕ–ಕಡಂದಲೆ ಭಾಗದ ಮಕ್ಕಳಿಗೂ ಆರೋಗ್ಯ ಸೇವೆ ತಲುಪಿಸಬೇಕೆಂಬ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾಗಿರಿ ಶಾಲೆ ತಮ್ಮ ಮನೆಯ ಪಕ್ಕದಲ್ಲಿರುವ ಶಾಲೆಯಾಗಿದ್ದು, ಈ ಶಾಲೆಯ ಮಕ್ಕಳೊಂದಿಗೆ ವಿಶೇಷ ಬಾಂಧವ್ಯವಿದೆ. ತಮ್ಮ ಊರಿನ ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಸೇವೆ ದೊರೆಯಬೇಕು ಎಂಬ ಆಶಯದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಸುಮಾರು 15 ಸರ್ಕಾರಿ ಶಾಲೆಗಳಲ್ಲಿ ಇಂತಹ ದಂತ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, ಮುಂದೆಯೂ ಹೆಚ್ಚಿನ ಸರ್ಕಾರಿ ಶಾಲೆಗಳಿಗೆ ಈ ಸೇವೆಯನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಅಮರಶ್ರೀ ಅಮರನಾಥ ಶೆಟ್ಟಿ ತಿಳಿಸಿದರು.
ಶಿಬಿರದಲ್ಲಿ ಅಂಗನವಾಡಿ ಮಕ್ಕಳಿಂದ ಹಿಡಿದು 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದವರೆಗೆ ದಂತ ತಪಾಸಣೆ ಹಾಗೂ ಅಗತ್ಯ ಸಲಹೆಗಳನ್ನು ನೀಡಲಾಯಿತು. ಮಕ್ಕಳಿಗೆ ಹಲ್ಲುಗಳ ಸ್ವಚ್ಛತೆ, ಹಲ್ಲುಗಳ ಆರೈಕೆ, ಹಲ್ಲುಜ್ಜುವ ಸರಿಯಾದ ವಿಧಾನ ಹಾಗೂ ದಂತ ಆರೋಗ್ಯದ ಮಹತ್ವದ ಕುರಿತು ವೈದ್ಯರು ಮಾಹಿತಿ ನೀಡಿದರು.
ಸರ್ಕಾರಿ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ದಂತ ಚಿಕಿತ್ಸಾ ಶಾಲಾ ಶಿಬಿರವನ್ನು ಆಯೋಜಿಸಿದ ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಸೇವೆಯನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಶ್ಲಾಘಿಸಿದರುಅಂಗನವಾಡಿ ಕಾರ್ಯಕರ್ತೆ ಬೇನಾಡಿಕ್ಟದಾಂತಿಸ್, ಹಾಗೂ ಶಿಕ್ಷಕಿ ಸೌಮ್ಯ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು..ಶಾಲಾ ಮುಖ್ಯಶಿಕ್ಷಕಿ ಪ್ರತಿಭಾ ಎಂ.ಪಿ. ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಪೌಲಿನ್ ಪಿಂಟೋ ವಂದಿಸಿದರು.

ವರದಿ:ಜಗದೀಶ್‌ ಪೂಜಾರಿ ಕಡಂದಲೆ