ಮೋದಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ : ಶಾಸಕ ಯಶ್‌ಪಾಲ್‌ ಸುವರ್ಣ

0
39

ವರ್ಷದ 10 ತಿಂಗಳು ವಿದೇಶಿ ಪ್ರವಾಸದಲ್ಲಿ ಮೋಜು ಮಸ್ತಿ ಮಾಡುವ ರಾಹುಲ್​ಗಾಂಧಿ ತಮಿಳುನಾಡಿನಲ್ಲಿ ತನ್ನ ಅಪ್ಪನನ್ನು ಕೊಂದ ಎಲ್​ಟಿಟಿ ಪರ ಸಹಾನುಭೂತಿ ಹೊಂದಿದವರ ಜೊತೆ ಕೈಜೋಡಿಸಿದ್ದಾರೆ. ಇದರಿಂದ ಅವರ ಮನಸ್ಥಿತಿಗೊತ್ತಾಗುತ್ತದೆ. ಪ್ರಧಾನಿ ಸ್ಥಾನದ ಹಿರಿಮೆ ಮರೆತು ಅವರ ನಿವಾಸ ಮುಂದೆ ಧರಣಿ ನಡೆಸುವುದು ಖಂಡನೀಯ. ಪ್ರಧಾನಿ ಮೋದಿಗಾಗಿ ಜೀವಕೊಡಲು ನಾವು ಸಿದ್ಧರಿದ್ದೇವೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಘೋಷಿಸಿದ್ದಾರೆ.

ನಗರದ ಜಟ್ಕಾ ಸ್ಟ್ಯಾಂಡ್​ನಲ್ಲಿ ಮಂಗಳವಾರ ಕಾಂಗ್ರೆಸ್​ ಹಾಗೂ ದೇಶವಿರೋಧಿ ಶಕ್ತಿಗಳ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್​ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಕಾಶ್​ರಾಜ್​ ಕರಾವಳಿಯಲ್ಲಿ ಕಲಾವಿದರ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಅಧಿಕಪ್ರಸಂಗತನ ಮಾಡಿದರೆ ಅರಬ್ಬಿ ಸಮುದ್ರಕ್ಕೆ ಬೀಳಬೇಕಾಗುತ್ತದೆ. ಮಣಿಪಾಲದಲ್ಲಿ ನಡೆದ ಕೊಕ್ರೋಚ್​ಗಳ ಪ್ರತಿಭಟನೆಯಲ್ಲಿ 7 ಜನ ತಮಿಳುನಾಡು ಮೂಲದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಬಡಕಾಯಿಸಿದ್ದಾರೆ. ಮಾಹೆ ಸಂಸ್ಥೆ ಮುಖ್ಯಸ್ಥರು ಇವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಅಕ್ರಮ ಮದರಸಾ, ಮತಾಂತರ ಕೇಂದ್ರಗಳಿಗೆ ಅನುಮತಿ ಕೊಟ್ಟರೆ ಮನೆಗೆ ನುಗ್ಗುತ್ತೇವೆ ಎಂದು ಎಚ್ಚರಿಸಿದರು.

ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಎ. ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್​ ಹೆಗ್ಡೆ, ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಶ್ರೀಕಾಂತ್​ ನಾಯಕ್​ ಅಲೆವೂರು, ದಿನಕರ್​ ಬಾಬು, ಸುರೇಶ್​ ನಾಯಕ್​ ಕುಯಿಲಾಡಿ, ಲಾಲಾಜಿ ಆರ್​. ಮೆಂಡನ್​, ಪ್ರಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಶ್ಯಾಮಲ್​ ಎಸ್​. ಕುಂದರ್​ ಉಪಸ್ಥಿತರಿದ್ದರು.