4 ಸಾವಿರ ಜನಸಂಖ್ಯೆಗೊಂದು ಭಾರತ್ ಜೋಡೋ ಯುವ ಸಂಘ: ಪ್ರತೀಕ್ ಬಾಯಲ್

0
27

ಉಡುಪಿ : ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಸಾಮರಸ್ಯ, ಕ್ರೀಡಾ ಮನೋಭಾವ ಹಾಗೂ ಸಮುದಾಯ ಸೇವೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನ ಸ್ಥಾಪಿಸಲಾಗುತ್ತಿದೆ. ಪ್ರತಿ 4,000 ಜನಸಂಖ್ಯೆಗೆ ಒಂದರAತೆ ಭಾರತ್ ಜೋಡೋ ಯುವ ಸಂಘವನ್ನು ರಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾಹಿತಿ ನೀಡಿದರು.

ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಯುವಜನತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದ್ದು, 16 ರಿಂದ 35 ವರ್ಷದೊಳಗಿನ ಯುವಕ ಯುವತಿಯರು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಪ್ರತಿಯೊಂದು ಸಂಘದಲ್ಲಿ 15 ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಪಾರದರ್ಶಕತೆಗಾಗಿ ಲಾಟರಿ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಮೂವರು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಸದಸ್ಯರು, 8 ಮಂದಿ ಸಾಮಾನ್ಯ ಸದಸ್ಯರಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದರು.

ಯಾವುದೇ ಭಾರತ್ ಜೋಡೋ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ. ಸಂಘದ ಕಾರ್ಯಕಾರಿ ಸಮಿತಿಯು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸಲಾಗುವುದು ಎಂದು ತಿಳಿಸಿದರು.
ಯುವ ಸಬಲೀಕರಣ ಹಾಗೂ ರಾಜ್ಯದಲ್ಲಿ ಒಟ್ಟು 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಘಗಳಿಗೆ ಪ್ರತಿ ವರ್ಷ ತಲಾ ರೂ. 10 ಲಕ್ಷಗಳ ಅನುದಾನದ ನೀಡಲಾಗುತ್ತದೆ ಎಂದರು.ವೆಬ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಅಥವಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರೀಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದೆ.

16 ವರ್ಷದಿಂದ 35 ವರ್ಷದವರೆಗಿನ ಯುವಕ ಯುವತಿಯರಿಗೆ ಸಂಘಗಳ ಸದಸ್ಯರಾಗಲು ಅವಕಾಶವಿದೆ. ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರಿರಬೇಕು. ಪ್ರತಿ ಸದಸ್ಯನಿಗೆ ನೋಂದಣಿ ಶುಲ್ಕ ರೂ. 10 ಇದ್ದು, ಪ್ರತಿಯೊಂದು ಸಂಘವನ್ನು ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960 ಅಡಿಯಲ್ಲಿ ನೋಂದಾಯಿಸಬೇಕು. ಅರ್ಜಿದಾರರು ಅದೇ ಗ್ರಾಮದ ಪಂಚಾಯತ್ ವಾರ್ಡಿನ ಸಾಮಾನ್ಯ ನಿವಾಸಿ ಆಗಿರಬೇಕು. ಪ್ರತಿಯೊಬ್ಬ ಸದಸ್ಯರು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅರ್ಹರಿರುತ್ತಾರೆ ಎಂದು ತಿಳಿಸಿದರು.

ಪ್ರತಿಯೊಂದು ಸಂಘವು ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ತಯಾರಿಸಿ ಕ್ರೀಡೆ, ಫಿಟ್‌ನೆಸ್, ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಕೌಶಲ್ಯಾಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದು. ಸಂಘದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪಾರದರ್ಶಕ ಲೆಕ್ಕಪತ್ರ, ನಿರ್ವಹಣೆ ಹಾಗೂ ಮೇಲ್ಕಂಡ ಕ್ಷೇತ್ರಗಳಲ್ಲಿನ ಪ್ರತಿಯೊಂದು ಚಟುವಟಿಕೆಯ ವರದಿಯನ್ನು ಜಿಯೋ-ಟ್ಯಾಗ್ ಮಾಡಿದ ಫೋಟೋಗಳೊಂದಿಗೆ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಬೇಕು. ಸರ್ಕಾರ, ಸಮುದಾಯದ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಹಯೋಗ ನೀಡಬೇಕು ಎಂದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ , ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಶ್ಮಿ ಎಸ್. ಆರ್., ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.