ಬೆಳ್ತಂಗಡಿ : ತಾಲೂಕಿನ ದಿಡುವೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಿಡುಪೆ ಜಲಪಾತದ ಪ್ರವೇಶ ದ್ವಾರದಲ್ಲಿ ಡಿಜಿಟಲ್ ರಶೀದಿ ನೀಡುವ ವಿಚಾರವಾಗಿ ಪ್ರವಾಸಿಗರೊಂದಿಗೆ ವಾಗ್ವಾದ ನಡೆದು, ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಮೇಲೆ ಹಲ್ಲೆ ನಡೆಸಿ ನಗದು ಹಣ ದೋಚಿದ ಘಟನೆ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಗೋಪಾಲ (42) ಅವರು ದಿಡುಪೆ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 15 ಯುವಕರ ತಂಡ ಜಲಪಾತಕ್ಕೆ ಆಗಮಿಸಿತ್ತು. ಇಲಾಖೆಯ ನಿಯಮದಂತೆ ತಲಾ ₹200ರಂತೆ ಒಟ್ಟು ₹3,000 ಪ್ರವೇಶ ಶುಲ್ಕವನ್ನು ನಗದು ರೂಪದಲ್ಲಿ ಪಡೆದು ಅವರಿಗೆ ಕೈಬರಹದ ರಶೀದಿ ನೀಡಲಾಗಿತ್ತು. ಅಲ್ಲದೆ, ತಂಡದಲ್ಲಿದ್ದ ಪ್ರತಾಪ್ ಬನ್ಮಲ್ ಎಂಬಾತನ ಗುರುತಿನ ಚೀಟಿಯನ್ನು ಪಡೆದು ನೋಂದಣಿ ಪುಸ್ತಕದಲ್ಲಿ ವಿವರ ದಾಖಲಿಸಿಕೊಂಡು ಜಲಪಾತಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.
ಜಲಪಾತ ವೀಕ್ಷಣೆ ಮುಗಿಸಿ ಹಿಂದಿರುಗಿದ ಬಳಿಕ ಯುವಕರ ತಂಡವು ಡಿಜಿಟಲ್ ರಶೀದಿಯನ್ನೇ ನೀಡಬೇಕು ಎಂದು ಒತ್ತಾಯಿಸಿದೆ ಎನ್ನಲಾಗಿದೆ. ಈ ವೇಳೆ ಡಿಜಿಟಲ್ ರಶೀದಿ ಯಂತ್ರ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗೋಪಾಲ ಅವರು ತಿಳಿಸಿದರೂ, ಯುವಕರು ವಾಗ್ವಾದ ಮುಂದುವರಿಸಿದ್ದಾಗಿ ಹೇಳಲಾಗಿದೆ.
ವಾದ ವಿವಾದ ತಾರಕಕ್ಕೇರಿ, ಕೆಲವರು ಗೋಪಾಲ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ನಗದು ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

