ಹತ್ತು ಸಾವಿರ ಹೆಜ್ಜೆಗಳ ಹತ್ತು ಲಾಭಗಳು

0
10

ಬಿರುಸುನಡಿಗೆ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಅವಶ್ಯಕ ವ್ಯಾಯಾಮವಾಗಿದ್ದು, ಯಾವುದೇ ಖರ್ಚು ಇಲ್ಲದೆ ದೇಹದಲ್ಲಿ ಹೆಚ್ಚಾಗಿ ಶೇಖರಿಸಲ್ಪಟ್ಟ ಕೊಬ್ಬು ಅಥವಾ ಕ್ಯಾಲರಿಗಳನ್ನು ಕರಗಿಸುವ ಬಹಳ ಸುಲಭವಾದ ವ್ಯಾಯಾಮವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಎಲ್ಲ ವೈದ್ಯರುಗಳು ಹಾಗೂ ಜಿಮ್ ತರಬೇತುದಾರರು ಒಮ್ಮತದಿಂದ ಅಂಗೀಕರಿಸಿದ್ದಾರೆ.

ಇತ್ತೀಚೆಗೆ ಯುವಜನರು ಮತ್ತು ಫಿಟ್‌ನೆಸ್‌ಪ್ರಿಯ ವ್ಯಕ್ತಿಗಳು ಈ ಸುಲಭದ ದಾರಿಗೆ ಒಲವು ತೋರುತ್ತಿದ್ದಾರೆ ಮತ್ತು ಇದೊಂದು ಜನಪ್ರಿಯ ದೈಹಿಕ ಗುರಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹತ್ತು ಸಾವಿರ ಹೆಜ್ಜೆ ಅಂದರೆ ಸುಮಾರು ೭.೫ಕಿ.ಮೀ ನಿಂದ ೮ ಕಿ.ಮೀಟರ್ (೫ ಮೈಲಿ)ಗಳ ದೂರಕ್ಕೆ ಸಮನಾಗಿರುತ್ತದೆ ಮತ್ತು ಇಷ್ಟು ದೂರ ಕ್ರಮಿಸಲು ಸರಿಸುಮಾರು ೯೦ ರಿಂದ ೧೦೦ ನಿಮಿಷಗಳು ನಿರಂತರವಾಗಿ ನಡೆಯಬೇಕಾಗುತ್ತದೆ. ಚುರುಕಾಗಿ ನಡೆದಲ್ಲಿ ಹತ್ತು ನಿಮಿಷಗಳಲ್ಲಿ ಸುಮಾರು ೧೦೦೦ ಹೆಜ್ಜೆಗಳನ್ನು ಕ್ರಮಿಸಬಹುದಾಗಿದೆ. ನಿರಂತರವಾಗಿ ಹತ್ತು ಸಾವಿರ ಹೆಜ್ಜೆಗಳನ್ನು ಒಂದೇ ಬಾರಿಗೆ ಮುಗಿಸಲು ಸಮಯದ ಅಭಾವ ಇರಬಹುದು ಮತ್ತು ಮಾಡಲು ಬೇಸರವಾದಲ್ಲಿ ಈ ಹತ್ತು ಸಾವಿರ ಹೆಜ್ಜೆಗಳನ್ನು ನಾಲಕ್ಕು ಭಾಗಗಳಾಗಿ ವಿಂಗಡಿಸಿ ಒಟ್ಟು ಹತ್ತು ಸಾವಿರ ಹೆಜ್ಜೆಗಳನ್ನು ಪೂರ್ತಿ ಮಾಡಬಹುದಾಗಿದೆ.

೧ ಬೆಳಿಗ್ಗೆ ಎದ್ದ ತಕ್ಷಣ ಪ್ರಾತವಿಧಿಗಳನ್ನು ತೀರಿಸಿದ ಬಳಿಕ ಒಳಾಂಗಣದಲ್ಲಿ ಅಥವಾ ರಸ್ತೆಯಲ್ಲಿ ೨೦ ನಿಮಿಷಗಳ ಕಾಲ ಬಿರುಸು ನಡಿಗೆ ಮಾಡಿದ್ದಲ್ಲಿ ಎರಡು ಸಾವಿರ ಹೆಜ್ಜೆ ಪೂರ್ತಿಯಾಗುತ್ತದೆ.

೨ ಊಟ, ಫಲಾಹಾರ ಮತ್ತು ಡಿನ್ನರ್ ಬಳಿಕ ಪ್ರತಿದಿನ ಹತ್ತು ನಿಮಿಷ ಬಿರುಸು ನಡಿಗೆ ಮಾಡಿದ್ದಲ್ಲಿ, ಮೂರು ಸಾವಿರ ಹೆಜ್ಜೆ ಪೂರ್ತಿಯಾಗುತ್ತದೆ.

೩ ದೈನಂದಿನ ಕೆಲಸಗಳನ್ನು ಮಾಡುವಾಗ, ಫೋನಿನಲ್ಲಿ ಮಾತನಾಡುವಾಗ ಮತ್ತು ಕಛೇರಿ ಕೆಲಸ ಮಾಡುವಾಗ ಕನಿಷ್ಟ ಮೂವತ್ತು ನಿಮಿಷಗಳ ಕಾಲ ನಡೆದಾಡಿದ್ದಲ್ಲಿ, ಮತ್ತೆ ಮೂರುಸಾವಿರ ಹೆಜ್ಜೆ ಮುಗಿಯುತ್ತದೆ.

೪ ರಾತ್ರಿ ಮಲಗುವ ಮೊದಲು ಕನಿಷ್ಟ ೨೦ ನಿಮಿಷಗಳ ಕಾಲ ನಡೆದಲ್ಲಿ ಮತ್ತೆ ಎರಡು ಸಾವಿರ ಹೆಜ್ಜೆ ಪೂರ್ತಿಯಾಗಿ ದಿನದ ಹತ್ತು ಸಾವಿರ ಹೆಜ್ಜೆಗಳ ಕೋಟಾ ಸುಲಭದಲ್ಲಿ ಮುಗಿಯುತ್ತದೆ.

ಹತ್ತು ಲಾಭಗಳು ಏನು?

೧ ನಿರಂತರ ನಡಿಗೆಯಿಂದ ಹೃದಯದ ರಕ್ತನಾಳಗಳ ಆರೋಗ್ಯ ವೃದ್ಧಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿತಗೊಳಿಸುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

೨ ನಮ್ಮ ದೇಹದ ಮೂಳೆಗಳನ್ನು ಬಲಗೊಳಿಸಿ, ಸಮತೋಲನವನ್ನು ವರ್ಧಿಸುತ್ತದೆ ಮತ್ತು ಅಸ್ಥಿರಂದ್ರತೆ ರೋಗದ ಸಾಧ್ಯತೆಯನ್ನು ಕ್ಷೀಣಿಸುತ್ತದೆ.

೩ ನಮ್ಮ ದೇಹದ ಸ್ನಾಯುಗಳನ್ನು ಶಕ್ತಿಯುತಗೊಳಿಸಿ, ಸ್ನಾಯುಗಳ ಸಾಂದ್ರತೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.

೪ ನಿರಂತರ ನಡಿಗೆಯಿಂದ ದೇಹದಲ್ಲಿ ಹೆಚ್ಚಾಗಿ ಶೇಖರಿತವಾದ ಕೊಬ್ಬನ್ನು ಕರಗಿಸುತ್ತದೆ ಮತ್ತು ದೇಹದ ತೂಕವನ್ನು ನಿಯಂತ್ರಿಸುತ್ತದೆ.

೫ ನಡಿಗೆಯಿಂದಾಗಿ ನಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹ ಸದಾಕಾಲ ಉಲ್ಲಸಿತವಾಗಿರುವಂತೆ ಮಾಡುತ್ತದೆ.

6 ನಡಿಗೆಯು ನಮ್ಮ ಮನಸ್ಸಿಗೆ ಮುದನೀಡಿ ಮನಸ್ಸಿಗೆ ಹೊಸ ಚೈತನ್ಯ ನೀಡಿ, ಆಲಸ್ಯವನ್ನು ತೊಡೆದು ಹಾಕಿ, ಸದಾಕಾಲ ಖುಷಿಯಾಗಿರುವಂತೆ ಮಾಡುತ್ತದೆ.

೭ ನಿರಂತರ ನಡಿಗೆಯಿಂದ ಖಿನ್ನತೆ ಇಲ್ಲದಾಗುತ್ತದೆ. ಆತಂಕವನ್ನು ದೂರಮಾಡಿ ದೇಹಕ್ಕೆ ಹೊಸ ಹುರುಪು ಮತ್ತು ಶಕ್ತಿಯನ್ನು ತುಂಬುತ್ತದೆ. ಧನಾತ್ಮಕ ಯೋಚನೆಗಳು ಮೂಡುವಂತೆ ಪ್ರಚೋದಿಸುತ್ತದೆ.

೮ ಮಾನಸಿಕ ಒತ್ತಡವನ್ನು ದೂರ ಮಾಡಿ ನಿರುತ್ಸಾಹವನ್ನು ಕಡಿತಗೊಳಿಸಿ, ಲವಲವಿಕೆಯನ್ನು ವೃದ್ಧಿಸುತ್ತದೆ. ದೇಹ ಮತ್ತು ಮನಸ್ಸು ಸದಾಕಾಲ ಉಲ್ಲಸಿತವಾಗಿರುವಂತೆ ಪ್ರಚೋದಿಸುತ್ತದೆ. ಒತ್ತಡ ಉಂಟುಮಾಡುವ ಕಾರ್ಟಿಸೋಲ್ ಎಂಬ ರಸದೂತವನ್ನು ಸ್ರವಿಸದಂತೆ ತಡೆಯುತ್ತದೆ.

೯ ಪ್ರತಿದಿನ ನಡೆಯುವುದರಿಂದ ಇನ್ಸುಲಿನ್ ರಸದೂತಗಳ ಸಂವೇದನೆ ಸುಧಾರಿಸುತ್ತದೆ ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಟೈಪ್ ೨ ಮಧುಮೇಹ ತಡೆಯುವಲ್ಲಿ ನಿರಂತರ ನಡಿಗೆ ಅತೀ ಅವಶ್ಯಕ.

೧೦ ನಿರಂತರ ನಡಿಗೆಯಿಂದ ರಕ್ತದೊತ್ತಡ ನಿಯಂತ್ರಿಸಲ್ಪಡುತ್ತದೆ. ಪಾರ್ಶ ವಾಯು ಮತ್ತು ಕೊಲೆಸ್ಟಾಲ್ ಸಮಸ್ಯೆಗೆ ಇತಿಶ್ರೀ ಹಾಡುತ್ತದೆ.

ಡಾ| ಮುರಲೀ ಮೋಹನ ಚೂಂತಾರು.