ಕೊರಂಗ್ರಪಾಡಿಯಲ್ಲಿ ಕಳ್ಳತನಕ್ಕೆ ಒಳಗಾಗಿದ್ದ ಎತ್ತಿನ ರಕ್ಷಣೆ : ನೀಲಾವರ ಗೋಶಾಲೆಗೆ ಸ್ಥಳಾಂತರ

0
53

ಉಡುಪಿ : ಉಡುಪಿ ಸಮೀಪದ ಕೊರಂಗ್ರಪಾಡಿಯಲ್ಲಿ ವಾರಸುದಾರರಿಲ್ಲದೆ, ಅಸಹಾಯಕ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಹಗ್ಗದಿಂದ ಕಟ್ಟಿಹಾಕಲಾಗಿದ್ದ ಎತ್ತೊಂದನ್ನು ರಕ್ಷಿಸಿ, ನೀಲಾವರದ ಪೇಜಾವರ ಮಠದ ಕಾಮಧೇನು ಗೋಶಾಲೆಗೆ ಸ್ಥಳಾಂತರಿಸಲಾಗಿದೆ.

ರಾತ್ರಿ ವೇಳೆ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದಿದ್ದ ಎತ್ತನ್ನು ಸಾಗಿಸಲು ವಾಹನದ ವ್ಯವಸ್ಥೆ ಸಿಗದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಹಗ್ಗದಿಂದ ಕಟ್ಟಿ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಎತ್ತನ್ನು ಗಮನಿಸಿದ ಸ್ಥಳೀಯ ನಿವಾಸಿ ಸುಧಾ ಅವರು ಮಾನವೀಯತೆ ಮೆರೆದು, ಹಗ್ಗದಿಂದ ಅದನ್ನು ಮುಕ್ತಗೊಳಿಸಿದರು. ಬಳಿಕ ಕೆಲವು ದಿನಗಳ ಕಾಲ ತಮ್ಮ ಮನೆಯಲ್ಲಿಯೇ ಎತ್ತಿಗೆ ನೀರು ಮತ್ತು ಮೇವು ಒದಗಿಸಿ ಆರೈಕೆ ಮಾಡಿದರು. ನಂತರ ಈ ವಿಷಯವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದರು.

ತಕ್ಷಣ ಕಾರ್ಯಪ್ರವೃತ್ತರಾದ ನಿತ್ಯಾನಂದ ಒಳಕಾಡು ಅವರು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಅನುಮತಿ ಪಡೆದು, ಎತ್ತನ್ನು ನೀಲಾವರದ ಪೇಜಾವರ ಮಠದ ಕಾಮಧೇನು ಗೋಶಾಲೆಗೆ ಸಾಗಿಸಿ, ಅಲ್ಲಿ ಅಧಿಕೃತವಾಗಿ ದಾಖಲಿಸುವ ವ್ಯವಸ್ಥೆ ಮಾಡಿದರು.

ಕಳ್ಳತನಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಮೂಕಪ್ರಾಣಿಯೊಂದಕ್ಕೆ ಆಶ್ರಯ ಕಲ್ಪಿಸುವ ಮೂಲಕ ಸುಧಾ ಹಾಗೂ ನಿತ್ಯಾನಂದ ಒಳಕಾಡು ಅವರು ಮಾನವೀಯತೆ ಮತ್ತು ಜೀವಕಾರುಣ್ಯದ ಮಾದರಿಯಾಗಿದ್ದಾರೆ.