ಅಂಗವಿಕಲರ ಸ್ವಾವಲಂಬಿ ಬದುಕಿಗೆ ರೋಟರಿ ಕ್ಲಬ್ ಮಣಿಪಾಲದ ನೆರವು; ಡಿ.20ರಿಂದ ಉಚಿತ ಕೃತಕ ಅಂಗಾಂಗ ವಿತರಣೆ ಶಿಬಿರ

0
19

ಡಿ.10ರೊಳಗೆ ನೋಂದಣಿಗೆ ಅವಕಾಶ – 200ಕ್ಕೂ ಅಧಿಕ ಫಲಾನುಭವಿಗಳಿಗೆ ನೆರವಾಗುವ ಗುರಿ

ಮಣಿಪಾಲ : ಅಪಘಾತ, ಪೋಲಿಯೋ, ಜನ್ಮಜಾತ ಅಂಗವೈಕಲ್ಯ ಹಾಗೂ ಮಧುಮೇಹದಿಂದ ಅಂಗಾಂಗ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವವರಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ ವತಿಯಿಂದ 7ನೇ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ಸ್ ವಿತರಣೆ ಶಿಬಿರವನ್ನು ಆಯೋಜಿಸಲಾಗಿದೆ.

ರೋಟರಿ ಕ್ಲಬ್ ಮಣಿಪಾಲ, ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ವಿಕಲಚೇತನರ ಸಹಾಯತಾ ಸಮಿತಿ ಹಾಗೂ ಎನ್-ಸ್ಟ್ರೈಡ್ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ. ಡಿಸೆಂಬರ್ 20, 21 ಮತ್ತು 22ರಂದು ಮಣಿಪಾಲದ ಅನಂತನಗರದಲ್ಲಿರುವ ರೋಟರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜೈಪುರ ಫುಟ್ ಕ್ಯಾಂಪ್ ಆಯೋಜಿಸಲಾಗಿದೆ.

2015ರಿಂದ ನಿರಂತರವಾಗಿ ಈ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ರೋಟರಿ ಕ್ಲಬ್, ಇದೀಗ 7ನೇ ಶಿಬಿರವನ್ನು ಆಯೋಜಿಸುತ್ತಿದೆ. ಈ ಹಿಂದಿನ ಪ್ರತಿ ಶಿಬಿರಕ್ಕೆ ಸುಮಾರು 18 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಪ್ರತಿ ಶಿಬಿರದ ಮೂಲಕ ಸುಮಾರು 200 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಈ ಮೂಲಕ ಅಂಗವೈಕಲ್ಯ ಹೊಂದಿರುವ ಹಲವರಿಗೆ ಹೊಸ ಭರವಸೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಸ್ಥೆ ನೆರವಾಗಿದೆ.

ಶಿಬಿರದಲ್ಲಿ ಪೋಲಿಯೋ ಪೀಡಿತರು ಹಾಗೂ ಅಂಗವೈಕಲ್ಯ ಹೊಂದಿರುವವರಿಗೆ ಉಚಿತವಾಗಿ ಕೃತಕ ಕಾಲುಗಳು ಮತ್ತು ಕ್ಯಾಲಿಪರ್ಸ್‌ಗಳನ್ನು ಒದಗಿಸಲಾಗುವುದು. ಅಲ್ಲದೆ, ಮಧುಮೇಹದಿಂದ ಉಂಟಾಗುವ ಕಾಲಿನ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ, ಕಾಲುಗಳ ಆರೋಗ್ಯ ಮತ್ತು ರಕ್ಷಣೆಯ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ.

ಅಂಗವೈಕಲ್ಯ ಹೊಂದಿರುವವರು ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸುವಂತಾಗಬೇಕು. ಆತ್ಮವಿಶ್ವಾಸದಿಂದ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಬೇಕು ಎಂಬುದು ಈ ಮಾನವೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಒಂದು ಕೃತಕ ಕಾಲಿನ ಅಂದಾಜು ವೆಚ್ಚ 10 ಸಾವಿರ ರೂ. ಆಗಿದ್ದು, ಈ ಸೇವಾ ಕಾರ್ಯಕ್ಕೆ ದೇಣಿಗೆ ನೀಡಲು ಆಸಕ್ತರು ಆಯೋಜಕರನ್ನು ಸಂಪರ್ಕಿಸಬಹುದು.

ಶಿಬಿರದ ಪ್ರಯೋಜನ ಪಡೆಯಲು ಇಚ್ಛಿಸುವವರು ಡಿಸೆಂಬರ್ 10, 2026ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

  • ರೊ. ಪದ್ಮಾ ರಾವ್ – 9656082899
  • ರೊ. ಸೀಮಾ ಹಳ್ದಿಪುರ್ – 9845341617
  • ರೊ. ಸರಳಾ ರಾವ್ – 8880243255
  • ರೊ. ಸುಬೋಧ್ ಶೆಟ್ಟಿ – 9845514500
  • ರೊ. ಅರವಿಂದ್ ರಾವ್ – 8762371181

ಸ್ಥಳ: ರೋಟರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಅನಂತನಗರ, ಮಣಿಪಾಲ – 576104, ಉಡುಪಿ ಜಿಲ್ಲೆ.

ಅಗತ್ಯವಿರುವವರು ಈ ಉಚಿತ ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಮಣಿಪಾಲದ ಆಯೋಜಕರು ಮನವಿ ಮಾಡಿದ್ದಾರೆ.