ಉಡುಪಿ: ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ನೆಹರೂ ಕುಟುಂಬ ನೀಡಿದ ತ್ಯಾಗ-ಬಲಿದಾನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ದೇಶಕ್ಕೆ ರಕ್ತ ಚೆಲ್ಲಿದ ಇತಿಹಾಸ ನೆಹರೂ-ಗಾಂಧಿ ಕುಟುಂಬದ್ದಾಗಿದೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ವಂಶವನ್ನು ನಾಶ ಮಾಡುತ್ತೇವೆ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ಧ್ವೇಷ ಭಾಷಣ ಮಾಡಿದ ಶಾಸಕ ಯಶ್ಪಾಲ್ ಸುವರ್ಣ ನಡೆ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇಶದ ಮಣ್ಣಿನಲ್ಲಿ ರಾಜೀವ್ ಗಾಂಧಿ ಅವರ ರಕ್ತವಿದೆ, ಇಂದಿರಾ ಗಾಂಧಿಯವರ ಬೂದಿಯಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ನಾಯಕಿ ಸೋನಿಯಾ ಗಾಂಧಿ. ಅಂತಹ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ ಬಿಜೆಪಿ ನಾಯಕರ ವಿನಾಶಕಾರಿ ಬುದ್ಧಿಯನ್ನು ನಾಶ ಮಾಡಬೇಕಿದೆ ಎಂದರು.
ಗಾಂಧಿ ಸಂತತಿ ವರ್ಸಸ್ ಗೋಡ್ಸೆ ಸಂತತಿ
ನಾವು ಯಶ್ಪಾಲ್ ಸುವರ್ಣ ಅವರಿಗೆ ಗೌರವದಿಂದಲೇ ಮಾತನಾಡಿಸುತ್ತೇವೆ. ನಮ್ಮದು ಅಹಿಂಸೆಯನ್ನು ನಂಬಿದ ಗಾಂಧಿ ಸಂತತಿ, ಆದರೆ ನಿಮ್ಮದು ಗೋಡ್ಸೆ ಸಂತತಿ. ರಾಜಕೀಯ ವಿರೋಧಿಗಳಿಗೂ ಗೌರವ ಕೊಡುವುದನ್ನು ರಾಜಕೀಯ ಸಂಸ್ಕಾರವಾಗಿ ಬೆಳೆಸಿಕೊಂಡಿದ್ದೇವೆ ಎಂದು ಹೇಳಿದರು.
ಕೆಪಿಸಿಸಿ ಮುಖಂಡ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಶಾಸಕ ಯಶ್ಪಾಲ್ ಸಾರ್ವಜನಿಕ ನಡವಳಿಕೆಯಲ್ಲಿ ಮತ್ತು ಭಾಷಾ ಬಳಕೆಯಲ್ಲಿ ನಿಗ್ರಹ ಕಾಯ್ದುಕೊಳ್ಳಬೇಕು. ವಿಪಕ್ಷ ಹಾಗೂ ದೇಶದ ನಾಯಕರ ವಿರುದ್ಧ ಇಂತಹ ದ್ವೇಷಪೂರಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಅಧ್ಯೆ ಜ್ಯೋತಿ ಹೆಬ್ಬಾರ್, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

