ಮಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ನೀಡಲಾಗುವ ‘ನಾರದ ಪುರಸ್ಕಾರ’ ಪ್ರಶಸ್ತಿಗೆ ‘ಹೊಸ ದಿಗಂತ ಪತ್ರಿಕೆ’ಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಅವರು ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಆ.4 ರಂದು ಸಂಜೆ 4 ಗಂಟೆಗೆ
ಕಾರಣಗಿರಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ನಡೆಯಲಿದೆ.
ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮತ್ತಿತರರು ಉಪಸ್ಥಿತರಿರುವರು.
ಒಟ್ಟು ಒಂಭತ್ತು ಮಂದಿ ಪತ್ರಕರ್ತರಿಗೆ ನಾರದ ಪುರಸ್ಕಾರ ಪ್ರದಾನವಾಗಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಡಿ. ಪಳ್ಳಿ ಅವರು ಕಳೆದ 19 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ 2013ರಲ್ಲಿ ಅತ್ಯುತ್ತಮ ಗ್ರಾಮೀಣ ವರದಿಗಾಗಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪ.ಗೋ ಪ್ರಶಸ್ತಿ), ಸಮಾಜದಲ್ಲಿ ಸೌಹಾರ್ದತೆ ಪ್ರತಿಬಿಂಬಿಸುವ ವಿಶೇಷ ವರದಿಗಾಗಿ 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಲಭಿಸಿದೆ.

