ದೇಶಕ್ಕಾಗಿ ರಾಹುಲ್​ ಕುಟುಂಬ ತ್ಯಾಗ ಅವಿಸ್ಮರಣೀಯ : ಕೆಪಿಸಿಸಿ ವಕ್ತಾರ ನಿಕೇತ್​ ರಾಜ್​

0
12

ಉಡುಪಿ: ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್​ ಗಾಂಧಿ ಹಾಗೂ ನೆಹರೂ ಕುಟುಂಬ ನೀಡಿದ ತ್ಯಾಗ-ಬಲಿದಾನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ದೇಶಕ್ಕೆ ರಕ್ತ ಚೆಲ್ಲಿದ ಇತಿಹಾಸ ನೆಹರೂ-ಗಾಂಧಿ ಕುಟುಂಬದ್ದಾಗಿದೆ. ಇಂದಿರಾ ಗಾಂಧಿ ಹಾಗೂ ರಾಜೀವ್​ ಗಾಂಧಿ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ವಂಶವನ್ನು ನಾಶ ಮಾಡುತ್ತೇವೆ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಕೆಪಿಸಿಸಿ ವಕ್ತಾರ ನಿಕೇತ್​ ರಾಜ್​ ಮೌರ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್​ ಗಾಂಧಿ ವಿರುದ್ಧ ಧ್ವೇಷ ಭಾಷಣ ಮಾಡಿದ ಶಾಸಕ ಯಶ್​ಪಾಲ್​ ಸುವರ್ಣ ನಡೆ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್​ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇಶದ ಮಣ್ಣಿನಲ್ಲಿ ರಾಜೀವ್​ ಗಾಂಧಿ ಅವರ ರಕ್ತವಿದೆ, ಇಂದಿರಾ ಗಾಂಧಿಯವರ ಬೂದಿಯಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ನಾಯಕಿ ಸೋನಿಯಾ ಗಾಂಧಿ. ಅಂತಹ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ ಬಿಜೆಪಿ ನಾಯಕರ ವಿನಾಶಕಾರಿ ಬುದ್ಧಿಯನ್ನು ನಾಶ ಮಾಡಬೇಕಿದೆ ಎಂದರು.
ಗಾಂಧಿ ಸಂತತಿ ವರ್ಸಸ್​ ಗೋಡ್ಸೆ ಸಂತತಿ
ನಾವು ಯಶ್​ಪಾಲ್​ ಸುವರ್ಣ ಅವರಿಗೆ ಗೌರವದಿಂದಲೇ ಮಾತನಾಡಿಸುತ್ತೇವೆ. ನಮ್ಮದು ಅಹಿಂಸೆಯನ್ನು ನಂಬಿದ ಗಾಂಧಿ ಸಂತತಿ, ಆದರೆ ನಿಮ್ಮದು ಗೋಡ್ಸೆ ಸಂತತಿ. ರಾಜಕೀಯ ವಿರೋಧಿಗಳಿಗೂ ಗೌರವ ಕೊಡುವುದನ್ನು ರಾಜಕೀಯ ಸಂಸ್ಕಾರವಾಗಿ ಬೆಳೆಸಿಕೊಂಡಿದ್ದೇವೆ ಎಂದು ಹೇಳಿದರು.
ಕೆಪಿಸಿಸಿ ಮುಖಂಡ ಸುಧೀರ್​ ಕುಮಾರ್​ ಮರೋಳಿ ಮಾತನಾಡಿ, ಶಾಸಕ ಯಶ್​ಪಾಲ್​ ಸಾರ್ವಜನಿಕ ನಡವಳಿಕೆಯಲ್ಲಿ ಮತ್ತು ಭಾಷಾ ಬಳಕೆಯಲ್ಲಿ ನಿಗ್ರಹ ಕಾಯ್ದುಕೊಳ್ಳಬೇಕು. ವಿಪಕ್ಷ ಹಾಗೂ ದೇಶದ ನಾಯಕರ ವಿರುದ್ಧ ಇಂತಹ ದ್ವೇಷಪೂರಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್​ ಸೊರಕೆ, ಮಾಜಿ ಶಾಸಕ ಗೋಪಾಲ್​ ಪೂಜಾರಿ, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಮಹಿಳಾ ಕಾಂಗ್ರೆಸ್​ ಅಧ್ಯೆ ಜ್ಯೋತಿ ಹೆಬ್ಬಾರ್​, ಮುಖಂಡರಾದ ಪ್ರಸಾದ್​ ರಾಜ್​ ಕಾಂಚನ್​, ರಮೇಶ್​ ಕಾಂಚನ್​ ಮೊದಲಾದವರು ಉಪಸ್ಥಿತರಿದ್ದರು.