ಹಾವಂಜೆ ಜಂಕ್ಷನ್–2ನೇ ವಾರ್ಡ್ ರಸ್ತೆ ಅವ್ಯವಸ್ಥೆ : ಹೊಂಡ, ಪೊದೆಗಳಿಂದ ನರಕಯಾತನೆ ; ತಕ್ಷಣ ದುರಸ್ತಿಗೆ ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಕೀಳಂಜೆ ಆಗ್ರಹ

0
12

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾವಂಜೆ ಜಂಕ್ಷನ್‌ನಿಂದ 2ನೇ ವಾರ್ಡ್‌ಗೆ ಸಂಪರ್ಕಿಸುವ ಪಂಚಾಯತ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳು, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ದಟ್ಟ ಪೊದೆಗಳು ಹಾಗೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸುಮಾರು 75ರಿಂದ 100 ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ಮನೆಗಳು, ವ್ಯಾಪಾರ ಸಂಸ್ಥೆಗಳು ಹಾಗೂ ವಿವಿಧ ಉದ್ಯಮಗಳಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಪ್ರತಿದಿನ ಹಗಲು-ರಾತ್ರಿ ಎನ್ನದೆ ಭಾರೀ ವಾಹನಗಳು ಸೇರಿದಂತೆ ಅನೇಕ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೆ ಹಲವು ವರ್ಷಗಳ ಹಿಂದೆ ಹಾಕಿದ್ದ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ.

ಸ್ಥಳೀಯ ನಿವಾಸಿ ಜಯಕರ್ ದಾಸ್ ಅವರ ಪ್ರಕಾರ, ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಪ್ರತಿದಿನ ಜೀವಭಯದಲ್ಲಿ ಓಡಾಡುವಂತಾಗಿದೆ. ಮಳೆ ಬಂದಾಗ ರಸ್ತೆಯಲ್ಲಿರುವ ಹೊಂಡಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಇನ್ನಷ್ಟು ತೊಂದರೆ ಉಂಟಾಗುತ್ತಿದೆ. ರಾತ್ರಿ ವೇಳೆ ಸಮರ್ಪಕ ಬೀದಿ ದೀಪಗಳಿಲ್ಲದ ಕಾರಣ ವಿಷಜಂತುಗಳ ಹಾವಳಿಯ ಭೀತಿಯೂ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ಥಳೀಯರು ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುತ್ತಿದ್ದರೂ ಮೂಲಭೂತ ಸೌಲಭ್ಯಗಳೇ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ವರ್ಷದಿಂದ ಹಾಕಿದ ಡಮರು ಜಲ್ಲಿಕಲ್ಲು ಎದ್ದು ಈ ರಸ್ತೆಯಲ್ಲಿ ಸಂಪರ್ಕಿಸುವ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ ಎಂದು ಇಲ್ಲಿನ ನಿವಾಸಿಯಾದ ಜಯಕರ್ ದಾಸ್ ಅವರು ಆರೋಪಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಮಾತನಾಡಿ, ಚುನಾವಣೆ ಸಮೀಪಿಸಿದಾಗ ಮಾತ್ರ ಜನಪ್ರತಿನಿಧಿಗಳು ಮತ ಕೇಳಲು ಬರುತ್ತಾರೆ. ಆದರೆ ರಸ್ತೆ, ಚರಂಡಿ, ಬೀದಿ ದೀಪಗಳಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ರಿಕ್ಷಾ ಚಾಲಕರು ಸೇರಿದಂತೆ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ. ಆದ್ದರಿಂದ ತಾತ್ಕಾಲಿಕ ಕ್ರಮವಾಗಿ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸಿ, ಅಪಾಯಕಾರಿ ಮರಗಳ ಕೊಂಬೆಗಳನ್ನು ಕತ್ತರಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಿ ಹಾಗೂ ಹೊಂಡಗಳಿಗೆ ಜಲ್ಲಿಕಲ್ಲು ಹಾಕಿ ರಸ್ತೆ ಸಂಚಾರಯೋಗ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ರಸ್ತೆಗಳ ಸ್ಥಿತಿಯೂ ಇದೇ ರೀತಿ ಹದಗೆಟ್ಟಿದ್ದು, ಮಳೆಗಾಲದ ಅವಧಿಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿ ಸಾರ್ವಜನಿಕರ ಸಂಕಷ್ಟ ನಿವಾರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.