
ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ಚುನಾವಣೆಯು ದಿನಾಂಕ 30-07-2026 ರಂದು ಯಶಸ್ವಿಯಾಗಿ ನಡೆಯಿತು. ಇದರ ಅಂಗವಾಗಿ ವಿಜೇತ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ಕಾಲೇಜಿನಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗೋ ಲಕ್ಷ್ಮಿ ಎಂಟರ್‌ಪ್ರೈಸಸ್‌ನ ಮಾಲಕರು ಹಾಗೂ ರಾಷ್ಟ್ರೀಯ ಜೆಸಿಐ (JCI) ತರಬೇತುದಾರರಾದ ಕೃಷ್ಣ ಮೋಹನ್ ಪಿ. ಎಸ್. ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಚುನಾವಣೆಯಲ್ಲಿ ವಿಜೇತರಾದ ಹಾಗೂ ಸ್ಪರ್ಧಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿ ನಾಯಕತ್ವದ ಜವಾಬ್ದಾರಿ, ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರಿತು ಶಿಸ್ತು, ಮಾನವೀಯತೆ, ಕರುಣೆ ಹಾಗೂ ನಾಗರಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ, ನಾಯಕತ್ವವು ಕೇವಲ ಹುದ್ದೆಯಲ್ಲ, ಅದು ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ದಾರಿ ತಿಳಿದಿರುವವನು ಮಾತ್ರವಲ್ಲ, ಇತರರಿಗೆ ದಾರಿ ತೋರಿಸುವವನೇ ನಿಜವಾದ ನಾಯಕ ಎಂದು ಹೇಳಿದ ಅವರು, ಅಕ್ಷಯ ಕಾಲೇಜಿನ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಘಟಕಗಳು ತಮ್ಮ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಮುಂದೆಯೂ ಇದೇ ರೀತಿಯ ಸಂಘಟಿತ ಕಾರ್ಯಚಟುವಟಿಕೆಗಳು ಮುಂದುವರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರ್ಥಿ ಜೀವನದಲ್ಲಿ ಆಗುವ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ., ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಷ್ ಕ್ಷತ್ರಿಯ, ವಿದ್ಯಾರ್ಥಿ ನಾಯಕ ಸೂರ್ಯ (ತೃತೀಯ ಬಿ.ಕಾಂ.) ಹಾಗೂ ಕಾರ್ಯದರ್ಶಿ ಕು. ದೇವಿಕಾ (ತೃತೀಯ ಫ್ಯಾಷನ್ ಡಿಸೈನ್) ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪದಪ್ರದಾನ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಗಣಕ ವಿಭಾಗದ ಉಪನ್ಯಾಸಕಿ ಸುಪ್ರಭ ಗಣ್ಯರನ್ನು ಪರಿಚಯಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ರಶ್ಮಿತಾ ಎಸ್. ವಿಜೇತ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಸ್ವಾಗತಿಸಿದರು. ಕಲಾ ವಿಭಾಗದ ಮುಖ್ಯಸ್ಥರಾದ ಅಶೋಕ್ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕರಾದ ಅಮೃತ್ ರಾಜ್ ವೈ. ಆರ್. ಕಾರ್ಯಕ್ರಮವನ್ನು ನಿರೂಪಿಸಿದರು.
2026-27ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ವಿಜೇತ ಪ್ರತಿನಿಧಿಗಳು
– ವಿದ್ಯಾರ್ಥಿ ನಾಯಕ – ಸೂರ್ಯ (ತೃತೀಯ ಬಿ.ಕಾಂ.), ಕಾರ್ಯದರ್ಶಿ – ದೇವಿಕಾ (ತೃತೀಯ ಫ್ಯಾಷನ್ ಡಿಸೈನ್), ಉಪನಾಯಕಿ – ರಕ್ಷಾ ಕೆ. ಆರ್. (ತೃತೀಯ ಬಿಸಿಎ), ಕೋಶಾಧಿಕಾರಿ – ಅಕ್ಷಿತ್ ಕೆ. ಆರ್. (ತೃತೀಯ ಬಿ.ಕಾಂ.), ಜೊತೆ ಕಾರ್ಯದರ್ಶಿ – ವೀಕ್ಷಾ (ದ್ವಿತೀಯ ಬಿಸಿಎ), ಕಾರ್ಯದರ್ಶಿ (ಲಲಿತ ಕಲೆ) – ಸೂರ್ಯ ಪ್ರಕಾಶ್ (ತೃತೀಯ ಬಿ.ಕಾಂ.), ಜೊತೆ ಕಾರ್ಯದರ್ಶಿ (ಲಲಿತ ಕಲೆ) – ಗ್ರೀಷ್ಮ (ದ್ವಿತೀಯ ಬಿ.ಕಾಂ.), ಕಾರ್ಯದರ್ಶಿ (ಕ್ರೀಡೆ) – ಚೇತನ್ (ತೃತೀಯ ಬಿ.ಎಚ್.ಎಸ್.), ಜೊತೆ ಕಾರ್ಯದರ್ಶಿ (ಕ್ರೀಡೆ) – ದೀಕ್ಷಿತಾ (ದ್ವಿತೀಯ ಫ್ಯಾಷನ್ ಡಿಸೈನ್), ಮೀಡಿಯಾ ಕಾರ್ಯದರ್ಶಿ – ಮೋಕ್ಷಾ ಪಕಳಕುಂಜ (ತೃತೀಯ ಫ್ಯಾಷನ್ ಡಿಸೈನ್), ಜೊತೆ ಮೀಡಿಯಾ ಕಾರ್ಯದರ್ಶಿ – ಚೈತನ್ಯ ಭಟ್ (ದ್ವಿತೀಯ ಇಂಟೀರಿಯರ್ ಡಿಸೈನ್), ವಿರೋಧ ಪಕ್ಷದ ನಾಯಕಿ – ಅಪೇಕ್ಷಾ ಕೆ. ಜೆ. ಶೆಟ್ಟಿ (ತೃತೀಯ ಬಿಸಿಎ).
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿಯ ಅರಿವು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದ್ದು, ಗಣ್ಯರ ಮಾರ್ಗದರ್ಶನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣದೊಂದಿಗೆ ಯಶಸ್ವಿಯಾಗಿ ನೆರವೇರಿತು.
