ಸೋಮಾವತಿ ನದಿ ಬೋರ್ಗರೆತ: ಪುತ್ತಿಲ ಸೇತುವೆ ಬಳಿ ರುದ್ರರಮಣೀಯ ದೃಶ್ಯ, ಕೃಷಿ ಜಲಾವೃತ

0
5

ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ–ಬೈಪಾಡಿ–ಕೊಯ್ಯೂರು ಸಂಪರ್ಕಿಸುವ ಪುತ್ತಿಲ ಸೇತುವೆ ಸಮೀಪ ಹರಿಯುವ ಸೋಮಾವತಿ ನದಿ ಅಪಾಯದ ಮಟ್ಟದಲ್ಲಿ ಬೋರ್ಗರೆಯುತ್ತಿದ್ದು, ರುದ್ರರಮಣೀಯ ದೃಶ್ಯ ಕಂಡುಬಂದಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ನದಿ ತಟದ ಎರಡೂ ಬದಿಯ ಕೃಷಿ ಭೂಮಿಗಳಿಗೆ ನೀರು ನುಗ್ಗಿ ವ್ಯಾಪಕ ಜಲಾವೃತ ಉಂಟಾಗಿದೆ. ಭತ್ತ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿದ್ದು, ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.

ನದಿಯ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಸ್ಥಳೀಯರು ಆಗಮಿಸುತ್ತಿದ್ದರೂ, ಪ್ರವಾಹದ ತೀವ್ರತೆಯನ್ನು ಗಮನಿಸಿ ನದಿ ಹಾಗೂ ಸೇತುವೆ ಸಮೀಪ ಅನಗತ್ಯವಾಗಿ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಮಳೆ ಇದೇ ರೀತಿ ಮುಂದುವರಿದರೆ ಜಲಾವೃತ ಪ್ರದೇಶದ ವ್ಯಾಪ್ತಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಇಲಾಖೆಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿವೆ. ರೈತರು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.