ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದ್ದು, 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸಚಿವ ಸ್ಥಾನಕ್ಕಾಗಿ ನಡೆದಿದ್ದ ಸುದೀರ್ಘ ರಾಜಕೀಯ ಕಸರತ್ತಿಗೆ ತೆರೆ ಬೀಳಲಿದೆ.
ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ, ಅನುಭವ ಹಾಗೂ ರಾಜಕೀಯ ಸಮೀಕರಣಗಳನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಪಟ್ಟಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಸಂಪುಟ ವಿಸ್ತರಣೆಯ ಮೂಲಕ ಸರ್ಕಾರಕ್ಕೆ ಇನ್ನಷ್ಟು ಬಲ ತುಂಬುವ ಜೊತೆಗೆ ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸುವ ಪ್ರಯತ್ನವೂ ನಡೆದಿದೆ ಎನ್ನಲಾಗುತ್ತಿದೆ.
ಪ್ರಮಾಣವಚನ ಸ್ವೀಕರಿಸಲಿರುವ ನೂತನ ಸಚಿವರ ಪಟ್ಟಿಯಲ್ಲಿ ಕೆಲ ಮಾಜಿ ಸಚಿವರು ಮತ್ತೆ ಸ್ಥಾನ ಪಡೆದಿದ್ದರೆ, ಹಲವು ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಒಟ್ಟು 20 ಮಂದಿ ಸಚಿವರಾಗಿ ಸೇರ್ಪಡೆಯಾಗಲಿದ್ದು, ಅವರಲ್ಲಿ 13 ಮಂದಿ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಪ್ರತಿನಿಧಿತ್ವದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ದೊರೆತಿದೆ.
ನೂತನ ಸಚಿವರ ಪಟ್ಟಿ
- ಪಿ. ಎಂ. ನರೇಂದ್ರಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಕೆ. ಎಸ್. ಬಸವಂತಪ್ಪ
- ಬಿ. ನಾಗೇಂದ್ರ
- ಟಿ. ರಘುಮೂರ್ತಿ
- ಬಿ. ಝಡ್. ಜಮೀರ್ ಅಹ್ಮದ್ ಖಾನ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುಟ್ಟರಂಗಶೆಟ್ಟಿ
- ಡಾ. ಅಜಯ್ ಸಿಂಗ್
- ಎನ್. ಚಲುವರಾಯಸ್ವಾಮಿ
- ಕೆ. ಎಂ. ಶಿವಲಿಂಗೇಗೌಡ
- ಹೆಚ್. ಸಿ. ಬಾಲಕೃಷ್ಣ
- ಗಾಯತ್ರಿ ಶಾಂತೇಗೌಡ
- ಬಸವರಾಜ ರಾಯರೆಡ್ಡಿ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ್ ಸವದಿ
- ಎಸ್. ಎಸ್. ಮಲ್ಲಿಕಾರ್ಜುನ
ಪ್ರಮಾಣವಚನ ಸಮಾರಂಭದ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

