ಭರತಾಂಜಲಿಯಿಂದ ಗುರುಪೂರ್ಣಿಮೆ – ಗುರುನಮನ – ಮಾತಾಪಿತರ ಚರಣ ಪೂಜನ ಕಾರ್ಯಕ್ರಮ

0
5


ಗುರುವಿನ ಮಾರ್ಗದರ್ಶನದಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ: ವಿದ್ವಾನ್ ನಾಗೇಶ್ ಬಪ್ಪನಾಡು

ಸುರತ್ಕಲ್: ಜೀವಕೋಟಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದುದು. ಮನುಷ್ಯರಲ್ಲಿ ಅನೇಕ ಮಹಾತ್ಮರಿದ್ದರೂ, ಗುರು ಸ್ಥಾನದಲ್ಲಿರುವವರು ಅವರೆಲ್ಲರಿಗಿಂತಲೂ ಶ್ರೇಷ್ಠರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಿದ್ವಾಂಸ ನಾಗೇಶ್ ಬಪ್ಪನಾಡು ಹೇಳಿದರು.


ಸುರತ್ಕಲ್‌ನ ಶ್ರೀ ಕ್ಷೇತ್ರ ಗಣೇಶಪುರದಲ್ಲಿ ಕೊಟ್ಟಾರದ ಶ್ರೀ ಭರತಾಂಜಲಿ ಸಂಸ್ಥೆಯ ವತಿಯಿಂದ ಗುರು ಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ಗುರು ನಮನ ಮತ್ತು ಮಾತಾಪಿತೃ ಪೂಜನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಜಗತ್ತಿಗೆ ವೇದಗಳನ್ನು ನೀಡಿದ ವೇದವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಇದು ಸನಾತನ ಹಿಂದೂ ಸಂಸ್ಕೃತಿಯ ಅತ್ಯಂತ ಪವಿತ್ರ ಹಬ್ಬವಾಗಿದೆ. ಎಲ್ಲ ದೇವತೆಗಳಲ್ಲೂ ಪ್ರಕಾಶಿಸುವ ಪರಾತ್ಪರ ತತ್ತ್ವವೇ ಗುರು ಎಂದು ಹೇಳಿದರು.
ಗುರುಶಿಷ್ಯ ಪರಂಪರೆಯು ವಿಶ್ವಕ್ಕೆ ಸನಾತನ ಧರ್ಮ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ತಾವು ಇಂದಿಗೂ ತಮಿಳುನಾಡಿನಲ್ಲಿರುವ ಗುರುಗಳ ಬಳಿಗೆ ತೆರಳಿ ನಮನ ಸಲ್ಲಿಸಿ, ಪಾಠ ಮತ್ತು ಅಧ್ಯಯನ ನಡೆಸುತ್ತಿರುವುದಾಗಿ ತಿಳಿಸಿದರು. ಗುರುಗಳ ಅನುಗ್ರಹದಿಂದಲೇ ಬದುಕಿನಲ್ಲಿ ಯಶಸ್ಸು ದೊರೆತಿದೆ ಎಂದರು.
ಭರತಾಂಜಲಿ ಸಂಸ್ಥೆಯು ಆಯೋಜಿಸಿದ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ. ಮಕ್ಕಳು ತಮ್ಮ ಮಾತಾಪಿತೃಗಳನ್ನು ಪೂಜಿಸಿ ಗೌರವಿಸುವುದು ಸಂಸ್ಕಾರಯುತ ಹಾಗೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವೇಶ್ವರ ಬದವಿದೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ಸ್ಥಾನವಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಈ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಗುರು ಕೇವಲ ವಿದ್ಯೆಯನ್ನು ಬೋಧಿಸುವವರಲ್ಲ; ಶಿಷ್ಯನ ವ್ಯಕ್ತಿತ್ವವನ್ನು ರೂಪಿಸಿ, ಜೀವನದ ಸರಿಯಾದ ದಾರಿಯನ್ನು ತೋರಿಸುವ ಮಾರ್ಗದರ್ಶಕರಾಗಿದ್ದಾರೆ. ಅಜ್ಞಾನವೆಂಬ ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡುವ ಗುರು ಎಂಬ ಶಕ್ತಿಯೇ ಜಗತ್ತಿನ ಎಲ್ಲ ಶಕ್ತಿಗಳಿಗಿಂತ ಶ್ರೇಷ್ಠವಾದುದು. ಗುರುಗಳ ಮಾರ್ಗದರ್ಶನ, ಆಶೀರ್ವಾದ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಶ್ರೀಕ್ಷೇತ್ರದ ಹಿಂದಿನ ಆಡಳಿತ ಮಂಡಳಿ ಸದಸ್ಯ ಧರ್ಮೇಂದ್ರ ಗಣೇಶಪುರ ಮಾತನಾಡಿ, ಭರತಾಂಜಲಿ ಸಂಸ್ಥೆಯು ಶ್ರೀಕ್ಷೇತ್ರದಲ್ಲಿ ನಿರಂತರವಾಗಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನೃತ್ಯ ಶಿಕ್ಷಣದ ಜತೆಗೆ ಮಕ್ಕಳಿಗೆ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಿ, ಅವರನ್ನು ಸಮಾಜದ ಆಸ್ತಿಗಳನ್ನಾಗಿ ರೂಪಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಕ್ಷಿಲಾ ಜೈನ್, ವಿದುಷಿ ಅನನ್ಯ ಕೆ. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಫೆಲೋಶಿಪ್ ಪಡೆದ ನೀತಾ ಶಾಸ್ತ್ರಿ ಅವರನ್ನು ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದುಷಿ ಅದಿತಿ ಪೂಜಾರಿ, ವಿದುಷಿ ಅನನ್ಯ ಕೆ. ಹಾಗೂ ಧ್ರುವಿ ಮಡಿವಾಳ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕಿ ಪ್ರತಿಮಾ ಶ್ರೀಧರ ಸನ್ಮಾನಿತರನ್ನು ಪರಿಚಯಿಸಿದರು. ವಿದುಷಿ ಅನನ್ಯ ಜೆ. ಕಾರ್ಯಕ್ರಮ ನಿರೂಪಿಸಿದರು. ಪ್ರಕ್ಷಿಲಾ ಜೈನ್ ವಂದಿಸಿದರು.