
ಮಂಗಳೂರು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ನೇಪಾಳ ಘಟಕದ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಹಿಲಿಯಾಣ ಗ್ರಾಮದ ಗೊಳಿಯಂಗಡಿ ಮೂಲದ, ಪಶುಪತಿನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಎಚ್. ಗಣೇಶ್ ಭಟ್ಟ ಅವರನ್ನು ನೇಮಕ ಮಾಡಲಾಗಿದೆ.
ಮೂಲತಃ ಉಡುಪಿ ಜಿಲ್ಲೆಯ ಹಿಲಿಯಾಣ ಗ್ರಾಮದ ಗೊಳಿಯಂಗಡಿಯವರಾದ ಎಚ್. ಗಣೇಶ್ ಭಟ್ಟ ಅವರು ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಋಗ್ವೇದ ಕ್ರಮಾಂತ ಅಧ್ಯಯನ ಹಾಗೂ ಸಂಸ್ಕೃತ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಾರೆ.
1989ರಿಂದ 1994ರವರೆಗೆ ದೆಹಲಿಯ ಮಹರ್ಷಿ ಮಹೇಶ್ ಯೋಗಿ ಪಾಠಶಾಲೆಯಲ್ಲಿ ಋಗ್ವೇದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು, 1994ರಿಂದ 1998ರವರೆಗೆ ಉಡುಪಿಯ ಬಾಳೆಕುಡ್ರು ಮಠದಲ್ಲಿ ಋಗ್ವೇದ ಬೋಧಕರಾಗಿ ಕಾರ್ಯನಿರ್ವಹಿಸಿದರು.
1998ರಲ್ಲಿ ನೇಪಾಳದ ವಿಶ್ವವಿಖ್ಯಾತ ಪಶುಪತಿನಾಥ ದೇವಸ್ಥಾನದಲ್ಲಿ ಅರ್ಚಕರಾಗಿ ನೇಮಕಗೊಂಡ ಅವರು, 2014ರಿಂದ ಇಂದಿನವರೆಗೆ ಪ್ರಧಾನ ಅರ್ಚಕರಾಗಿ (Chief Priest/Raval) ಸೇವೆ ಸಲ್ಲಿಸುತ್ತಿದ್ದಾರೆ. ವೈದಿಕ ಪರಂಪರೆ, ಧಾರ್ಮಿಕ ಸೇವೆ ಹಾಗೂ ಭಾರತೀಯ ಸಂಸ್ಕೃತಿಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿರುವ ಎಚ್. ಗಣೇಶ್ ಭಟ್ಟ ಅವರು ನೇಪಾಳದಲ್ಲಿ ನೆಲೆಸಿರುವ ತುಳು ಹಾಗೂ ಕನ್ನಡಿಗರನ್ನು ಸಂಘಟಿಸುವ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ.
2021ರಲ್ಲಿ ತುಳುವರ್ಲ್ಡ್ ಫೌಂಡೇಶನ್ ನೇಪಾಳದಲ್ಲಿ ಆಯೋಜಿಸಿದ್ದ “ತುಳು–ಕನ್ನಡ ಸ್ನೇಹ ಸಮ್ಮೇಳನ”ದ ಅಧ್ಯಕ್ಷರಾಗಿ ಯಶಸ್ವಿಯಾಗಿ ನೇತೃತ್ವ ವಹಿಸಿ, ನೇಪಾಳದಲ್ಲಿರುವ ತುಳು ಮತ್ತು ಕನ್ನಡಿಗರನ್ನು ಒಂದೇ ವೇದಿಕೆಯಡಿ ಸಂಘಟಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಅವರ ಧಾರ್ಮಿಕ ಸೇವೆ, ಸಂಘಟನಾ ಸಾಮರ್ಥ್ಯ, ಸಮಾಜಮುಖಿ ಚಟುವಟಿಕೆಗಳು ಹಾಗೂ ತುಳು-ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು-ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಎಚ್. ಗಣೇಶ್ ಭಟ್ಟ ಅವರನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್ ನೇಪಾಳ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಲ್ಚಾಡ್ ಹಾಗೂ ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ನೇಪಾಳ ಘಟಕದ ಅಧ್ಯಕ್ಷರಾದ ಶ್ರೀ ಎಚ್. ಗಣೇಶ್ ಭಟ್ಟ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.
