ಶ್ರೀ ಮಹಾವೀರಕಾಲೇಜು : ಮೂಡುಬಿದಿರೆ 2026-27ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ

0
2

ಶ್ರೀ ಮಹಾವೀರ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ಸೇವಾಭಾರತಿ ಕರ್ನಾಟಕ, ಕೇಶವ ಸ್ಮೃತಿ ಸಂವರ್ಧನಾ ಸಮಿತಿ (ರಿ.) ಮಂಗಳೂರು ಹಾಗೂ ಮೂಲತ್ವ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದಲ್ಲಿ ಕಾಲೇಜಿನ ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಹಾಗೂ ರೋವರ್ಸ್-ರೇಂಜರ್ಸ್ ಘಟಕಗಳ 2026-27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮೂಲತ್ವ ಪ್ರತಿಷ್ಠಾನದ ಸ್ಥಾಪಕರಾದ ಪ್ರಕಾಶ್ ಮೂಲತ್ವ ಉದ್ಘಾಟಿಸಿ ಮಾತನಾಡಿ, “ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವ ಸಂಘಟನೆಗಳು ಹಾಗೂ ಎನ್‌ಜಿಒಗಳು ಎನ್‌ಎಸ್‌ಎಸ್, ರೋವರ್ಸ್-ರೇಂಜರ್ಸ್, ಯುವ ರೆಡ್‌ಕ್ರಾಸ್ ಮುಂತಾದ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಮೂಲತ್ವ ಚಾರಿಟಬಲ್ ಟ್ರಸ್ಟ್‌ನ ಸದಸ್ಯೆ ಅಕ್ಷತಾ ಕದ್ರಿ ಅವರು ಮಾದಕ ವ್ಯಸನಕ್ಕೆ ಯುವಕರು ಒಳಗಾಗುವ ಕಾರಣಗಳು, ಅದರ ದುಷ್ಪರಿಣಾಮಗಳು ಹಾಗೂ ಅದರಿಂದ ಹೊರಬರುವ ಮಾರ್ಗಗಳ ಕುರಿತು ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಧಾಕೃಷ್ಣ ಮಾತನಾಡಿ, “ವಿದ್ಯಾರ್ಥಿಗಳು ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಕಾಲೇಜಿನಲ್ಲಿ ಆರಂಭಗೊಂಡಿರುವ ವಿವಿಧ ಪಠ್ಯೇತರ ಚಟುವಟಿಕೆಗಳ ಸಂಘಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸುವ ವೇದಿಕೆಯಾಗಲಿ” ಎಂದು ಹೇಳಿದರು.

ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ, ಸೇವಾಭಾರತಿ ಕರ್ನಾಟಕದ ಕಾರ್ಯದರ್ಶಿ ಕೆ. ಚಿನ್ನಯ್ಯ ಸ್ವಾಮಿ, ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಪ್ರತಿನಿಧಿಗಳು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಶಾರದಾ ಎ. ಹಾಗೂ ಚಿತ್ರಲೇಖ, ಯುವ ರೆಡ್‌ಕ್ರಾಸ್ ಅಧಿಕಾರಿ ಶ್ರೀಗೌರಿ, ರೇಂಜರ್ಸ್ ಅಧಿಕಾರಿ ಆಶ್ರಿತ, ರೋವರ್ಸ್ ಅಧಿಕಾರಿ ದಕ್ಷಿತ್ ಹಾಗೂ ವಿವಿಧ ಘಟಕಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರಕ್ಷಿತ್ ಸ್ವಾಗತಿಸಿದರು. ಪ್ರಣಮ್ಯ ಅತಿಥಿಗಳನ್ನು ಪರಿಚಯಿಸಿದರು. ಜ್ಞಾನಶ್ರೀ ಕಾರ್ಯಕ್ರಮ ನಿರೂಪಿಸಿದ್ದು, ಶ್ರಾವ್ಯ ವಂದಿಸಿದರು.

.