ಉಡುಪಿ: ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ಈಶ್ವರನಗರದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಯುವಕರನ್ನು ತಡೆದು, ಮೆಟಲ್ ಪಂಚ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಒಪ್ಪಿಸಿದ್ದಾರೆ.
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಶಿವಮೊಗ್ಗದ ಅಕ್ಷಯ್ ಎ (21), ಪುನೀತ್ ಎಸ್ (21), ಶಮಂತ ಕೆ.ಆರ್ (21), ಯಶವಂತ್ ಬಿ.ಜೆ (21) ಬಂಧಿತರು
ಘಟನೆಯ ಹಿನ್ನೆಲೆ: ಆ. 2ರಂದು ರಾತ್ರಿ ಸುಮಾರು 11.50 ಗಂಟೆಗೆ ದೂರುದಾರ ಯಶ್‌ರಾಜ್ ಅವರ ತಮ್ಮ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್ ಮತ್ತು ರೆಸ್ಟೋರೆಂಟ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎರಡು ಕಾರುಗಳಲ್ಲಿ ಬಂದ ಆರೋಪಿಗಳು, ಪವನ್ ಕುಮಾರ್ ಅವರನ್ನು ವಿನಾಕಾರಣ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಏಕಾಏಕಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಮೆಟಲ್ ಪಂಚ್‌ನಿಂದ ಪವನ್ ಕುಮಾರ್ ಅವರ ಮುಖಕ್ಕೆ ತೀವ್ರವಾಗಿ ಗುದ್ದಿದ್ದಾರೆ. ಪರಿಣಾಮವಾಗಿ ಪವನ್ ಕುಮಾರ್ ಅವರ ಮೂಗಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಅಷ್ಟೇ ಅಲ್ಲದೆ, ಬಿಡಿಸಲು ಬಂದ ಯಶ್‌ರಾಜ್ ಹಾಗೂ ಶ್ರೇಯಸ್ ಅವರಿಗೂ ಕಾಲಿನಿಂದ ತುಳಿದು, ಅವರ ಬಟ್ಟೆಗಳನ್ನು ಹರಿದು ಹಾಕಿ, ಪ್ರಾಣ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದರು. ಸಂತ್ರಸ್ತರು ನೀಡಿದ ದೂರಿನನ್ವಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

